ಹೈದರಾಬಾದ್, ಫೆ 05 (DaijiworldNews/HR): 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ಹೈದರಾಬಾದ್ನಲ್ಲಿ 216 ಅಡಿ ಎತ್ತರದಸಮಾನತೆಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಉದ್ಘಾಟಿಸಿದ್ದಾರೆ.
ಈ ಪ್ರತಿಮೆಯನ್ನು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವು ಎಂಬ ಐದು ಲೋಹಗಳ ಸಂಯೋಜನೆಯಾದ ಪಂಚಲೋಹದಿಂದ ನಿರ್ಮಿಸಲಾಗಿದ್ದು, ಇದು ವಿಶ್ವದ ಅತ್ಯಂತ ಎತ್ತರದ ಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ.
ಇದನ್ನು 54 ಅಡಿ ಎತ್ತರದ ಕಟ್ಟಡದ ಮೇಲೆ ಸ್ಥಾಪಿಸಲಾಗಿದ್ದು, ಇದನ್ನು 'ಭದ್ರ ವೇದಿ' ಎಂದು ಹೆಸರಿಸಲಾಗಿದೆ. ವೈದಿಕ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಗ್ರಂಥಗಳು, ರಂಗಮಂದಿರ, ಶ್ರೀ ರಾಮಾನುಜಾಚಾರ್ಯರ ಅನೇಕ ಕೃತಿಗಳನ್ನು ವಿವರಿಸುವ ಶೈಕ್ಷಣಿಕ ಗ್ಯಾಲರಿಗಾಗಿ ಮೀಸಲಾದ ಮಹಡಿಗಳನ್ನು ಹೊಂದಿದೆ.
ಈ ಪ್ರತಿಮೆಯನ್ನು ಶ್ರೀ ರಾಮಾನುಜಾಚಾರ್ಯ ಆಶ್ರಮದ ಶ್ರೀ ಚಿನ್ನಜೀಯರ್ ಸ್ವಾಮಿಗಳು ಪರಿಕಲ್ಪನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಶ್ರೀ ರಾಮಾನುಜಾಚಾರ್ಯರ ಜೀವನ ಪಯಣ ಮತ್ತು ಬೋಧನೆಯ ಕುರಿತು 3D ಪ್ರಸ್ತುತಿ ನಕ್ಷೆಯನ್ನು ಸಹ ಪ್ರದರ್ಶಿಸಲಾಗುತ್ತದೆ.