ಬೆಂಗಳೂರು, ಫೆ 05 (DaijiworldNews/HR): ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿಯ ಮೇಲ್ವಿಚಾರಣಾ ಸಮಿತಿಯು ನಿರ್ಧರಿಸುವಂತಹ ಸಮವಸ್ತ್ರಗಳನ್ನು ಧರಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983 ನಿಯಮದನ್ವಯ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸುವಂತಹ ಸಮವಸ್ತ್ರವನ್ನೆ ಧರಿಸಬೇಕು ಆದರೆ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ.
ಇನ್ನು ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಸರಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಧರಿಸಬೇಕು. ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸುವಂತಹ ಸಮವಸ್ತ್ರವನ್ನೆ ಧರಿಸಬೇಕು ಎಂದು ಸರಕಾರದ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್.ಆದೇಶದಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದ ಸಮವಸ್ತ್ರ ನಿಯಮದ ಕುರಿತಂತೆ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ 1983 ಅನ್ವಯ ಶಾಲಾ, ಕಾಲೇಜುಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರದ ನಿಯಮಗಳನ್ನು ಪಾಲಿಸುವಂತೆ ಆದೇಶ ನೀಡಿದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಶ್ರೀ ಬಿ.ಸಿ. ನಾಗೇಶ್ ಅವರಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಧನ್ಯವಾದಗಳನ್ನು ತಿಳಿಸಿದ್ದಾರೆ.