ಬೆಂಗಳೂರು, ಫೆ 05 (DaijiworldNews/MS): ರಾಜ್ಯದಲ್ಲಿನ ಹಿಜಾಬ್ ವಿವಾದ ಕಿಚ್ಚು ಇದೀಗ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದೆ. ಹಿಜಾಬ್ ವಿವಾದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಸಮರವೇ ನಡೆಯುತ್ತಿದೆ.
ಈ ನಡುವೆ ಹಿಜಾಬ್ ವಿವಾದ ಬಿಜೆಪಿಯೇ ಸೃಷ್ಟಿಸಿದ ಟೂಲ್ ಕಿಟ್ , ಹಿಜಾಬ್'ನಲ್ಲಿ ಮುಖ ಮುಚ್ಚಿಕೊಳ್ಳುವುದಷ್ಟೇ ಅಲ್ಲ, ಸರ್ಕಾರವೊಂದರ ವೈಫಲ್ಯಗಳನ್ನೂ ಮುಚ್ಚಿಕೊಳ್ಳಬಹುದು ಎಂದು ಬಿಜೆಪಿ ತೋರಿಸಿಕೊಡುತ್ತಿದೆ ಎಂದು ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದೆ.
ರಾಜ್ಯ ಕಾಂಗ್ರೆಸ್ ಘಟಕ ಈ ಬಗ್ಗೆ ಟ್ವೀಟ್ ಮಾಡಿದ್ದು, " ಹಿಜಾಬ್'ನಲ್ಲಿ ಮುಖ ಮುಚ್ಚಿಕೊಳ್ಳುವುದಷ್ಟೇ ಅಲ್ಲ, ಸರ್ಕಾರವೊಂದರ ವೈಫಲ್ಯಗಳನ್ನೂ ಮುಚ್ಚಿಕೊಳ್ಳಬಹುದು ಎಂದು ಬಿಜೆಪಿ ತೋರಿಸಿಕೊಡುತ್ತಿದೆ!ವಿಷಯವಲ್ಲದ ವಿಷಯವನ್ನು ವಿವಾದವನ್ನಾಗಿಸಿ ರಾಜ್ಯದಲ್ಲಿ ಕೋಮು ಕೇಂದ್ರಿತ ವಿಚಾರಗಳನ್ನು ಸದಾ ಚರ್ಚೆಯಲ್ಲಿಡಲು ಹವಣಿಸುತ್ತಿದೆ. ಮುಖ್ಯಮಂತ್ರಿ ಬೊಮ್ಮಯಿ ಅವರೇ, ರಾಜ್ಯದ ಮಾನ ಇನ್ನೆಷ್ಟು ತೆಗೆಯಬೇಕೆಂದಿದ್ದೀರಿ? ಎಂದು ಪ್ರಶ್ನಿಸಿದೆ.
ಸರ್ಕಾರಕ್ಕೆ ಹಿಜಾಬ್ ವಿವಾದ ಬಗೆಹರಿಯುವುದು ಬೇಕಿಲ್ಲ, ಹಾಗಾಗಿಯೇ ಇದನ್ನು ಬಗೆಹರಿಸದೆ ವ್ಯಾಪಿಸಲು ಅವಕಾಶ ಮಾಡಿಕೊಟ್ಟಿದೆ.ವಿವಾದ ಬಗೆಹರಿಸಬೇಕಾದ ಸಚಿವರು, ಆರ್ ಎಸ್ ಎಸ್ ಸಂಚಾಲಕರಂತೆ ವರ್ತಿಸುತ್ತಿರುವುದೇಕೆ ಎಂದು ವ್ಯಂಗ್ಯವಾಡಿದೆ.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಕಾಂಗ್ರೆಸ್" ಹಿಜಾಬ್ ವಿಚಾರವಾಗಿ ಅನಗತ್ಯ ವಿವಾದ ಸೃಷ್ಟಿಸಿದ ಬಿಜೆಪಿ ಶಾಲೆಗಳನ್ನೂ ತನ್ನ ಮತಾಂಧತೆಯ ವಿಷ ಬೀಜ ಬಿತ್ತುವ ಪ್ರಯೋಗಶಾಲೆಯನ್ನಾಗಿಸಿದೆ.ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನ ನಿರಾಕರಿಸಿದ ಸರ್ಕಾರ ಐತಿಹಾಸಿಕ ಅಪಚಾರವೆಸಗಿದೆ. ಶಿಕ್ಷಣ ಸಚಿವರೇ, ಕೂಡಲೇ ಈ ವಿವಾದಕ್ಕೆ ತೆರೆ ಎಳೆದು ಶೈಕ್ಷಣಿಕ ಕೇಂದ್ರಗಳನ್ನ ರಾಜಕೀಯದಿಂದ ಮುಕ್ತವಾಗಿರಿಸಿ ಎಂದು ಕಾಂಗ್ರೆಸ್ ಹೇಳಿತ್ತು.