ದೆಹಲಿ, ಫೆ 05 (DaijiworldNews/KP): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ, 1993 ಮುಂಬೈ ಸರಣಿ ಸ್ಫೋಟದ ಆರೋಪಿ ಅಬೂಬಕರ್ ಅಬ್ದುಲ್ ಗಫೂರ್ ಶೇಖ್ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳು ಬಂಧಿಸಿವೆ.
ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಅಬೂಬಕರ್, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳ ಬಳಕೆಯ ಬಗ್ಗೆ ತರಬೇತಿಯನ್ನು ನೀಡುತ್ತಿದ್ದನು, ಅಷ್ಟೇ ಅಲ್ಲದೆ ಆರ್ಡಿಎಕ್ಸ್ ಲ್ಯಾಂಡಿಂಗ್ ಮಾಡುವ ಬಗ್ಗೆ ಯೋಜನೆ ರೂಪಿಸುವಲ್ಲಿ ತೊಡಗಿಕೊಂಡಿದ್ದ ಎಂದು ಹೇಳಲಾಗಿದೆ.
29 ವರ್ಷಗಳಿಂದಲೂ ಭಾರತದ ಮೋಸ್ಟ್ವಾಂಟೆಡ್ ಪಟ್ಟಿಯಲ್ಲಿದ್ದ ಉಗ್ರ ಅಬೂಬಕರ್ನನ್ನು ಭಾರತೀಯ ಭದ್ರತಾ ದಳದ ಸಿಬ್ಬಂದಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಬಂಧಿಸಿ, ಭಾರತಕ್ಕೆ ಕರೆತರಲು ಕಾನೂನು ಪ್ರಕ್ರಿಯೆ ಶುರುವಾಗಿದೆ. ಇನ್ನು 2019ರಲ್ಲಿ ಅಬೂಬಕರ್ನನ್ನು ಯುಎಇ ಭದ್ರತಾ ಏಜೆನ್ಸಿಗಳು ಬಂಧಿಸಿದ್ದರು, ಆದರೆ ಸರಿಯಾದ ದಾಖಲೆಗಳು ಸಿಗದ ಕಾರಣ ಕಸ್ಟಡಿಯಿಂದ ಬಿಡುಗಡೆಗೊಳಿಸಲಾಗಿತ್ತು.
ಮುಂಬೈ ಸ್ಪೋಟದ ನಂತರ ಈತ ಪಾಕಿಸ್ತಾನ ಮತ್ತು ಯುಎಇನಲ್ಲಿ ವಾಸವಾಗಿದ್ದ, ಇದೀಗಾ ಯುಎಇನಲ್ಲಿ ವಾಸವಾಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿ ಭಾರತೀಯ ಭದ್ರತಾ ದಳದ ಸಿಬ್ಬಂದಿಗಳು ಆತನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.