ಲಖನೌ, ಫೆ 04(DaijiworldNews/KP): ಇತ್ತೀಚೆಗೆ ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ವಕೀಲೆ ಸೀಮಾ ಕುಶ್ವಾಹಾ ಅವರನ್ನು ಇಂದು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ್ದಾರೆ.
ಮಹಿಳೆಯರ ವಿರುದ್ದ ಅಪರಾಧ ಪ್ರಕರಣಗಳಲ್ಲಿ ಹೋರಾಟ ಮಾಡುತ್ತಿದ್ದ ಸೀಮಾ ಕುಶ್ವಾಹಾ ಅವರು ಬಹುಜನ ಸಮಾಜ ಪಕ್ಷದ ಮೊದಲ ವಕ್ತಾರರೆನಿಸಿದ್ದಾರೆ.
ಸೀಮಾ ಅವರು ಅಸಾಧಾರಣ ವಕೀಲೆ ಮಾತ್ರವಲ್ಲದೆ ಸಮಾಜ ಸೇವೆಯನ್ನೂ ಮಾಡುತ್ತ ಬಂದವರು. ಹೀಗಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸೀಮಾರನ್ನು ವಕ್ತಾರರನ್ನಾಗಿ ನೇಮಿಸಿದ್ದಾರೆ, ಇನ್ನು ಭವಿಷ್ಯದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಲಾಗುವುದು, ಅಲ್ಲದೆ ಅವರಿಗೆ ಪಶ್ಚಿಮ ಉತ್ತರ ಪ್ರದೇಶ, ಇಟಾವಾ ಮತ್ತು ಬುಂದೇಲ್ಖಂಡದಲ್ಲಿ ಮೌರ್ಯ, ಶಾಕ್ಯ ಮತ್ತು ಕುಶ್ವಾಹಾ ಸಮುದಾಯಗಳಲ್ಲಿ ಉತ್ತಮ ಪ್ರಭಾವ ಹೊಂದಿದ್ದಾರೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಸೀಮಾ ಅವರು ಮಹಿಳೆಯರ ವಿರುದ್ದದ ಅಪರಾಧ ಪ್ರಕರಣಗಳ ವಿರುದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಕೆಳ ನ್ಯಾಯಲಯಗಳಿಂದ ಸುಪ್ರೀಂ ಕೋರ್ಟ್ವರೆಗೂ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದರು ಎಂದು ಬಹುಜನ ಸಮಾಜವಾದಿ ಪಕ್ಷ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.