ಬೆಂಗಳೂರು: ಫೆ 04(DaijiworldNews/MS): ಹಿಜಬ್-ಕೇಸರಿ ಶಾಲು ವಿವಾದದ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, " ಹಿಜಬ್ ಹಾಕುವುದು ಮೂಲಭೂತ ಹಕ್ಕು. ಇಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಹಾಕಿಕೊಂಡು ಬರಬೇಡಿ ಎಂದ ಪ್ರಿನ್ಸಿಪಾಲ್ನನ್ನು ಸಸ್ಪೆಂಡ್ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
ಸಮವಸ್ತ್ರ ಕಡ್ಡಾಯ ಎಂದು ಸರ್ಕಾರ ಎಲ್ಲೂ ಹೇಳಿಲ್ಲ. ಪಿಯುಸಿ ಲೆವೆಲ್ನಲ್ಲಿ ಸಮವಸ್ತ್ರ ಇಲ್ಲವೇ ಇಲ್ಲ, ಹಿಜಬ್ ಹಾಕುವುದು ಮೂಲಭೂತ ಹಕ್ಕು. ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ. ಸರ್ಕಾರಿ ಕಾಲೇಜು ಅದು. ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಹೆಣ್ಣುಮಕ್ಕಳನ್ನ ತಡೆದಿದ್ದು ಅಮಾನವೀಯ. ಕಣ್ಣೀರು ಹಾಕಿದರೂ ಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವೆಲ್ಲವನ್ನೂ ಯಾರೋ ಬಿಜೆಪಿಯ ಮುಖಂಡರು ಹೇಳಿ ಮಾಡಿಸುವಂತಿದೆ. ಇದು ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ತಡೆಯುವ ಪ್ರಯತ್ನ. ಅವನ್ಯಾವನೋ ಶಾಸಕ ರಘುಪತಿ ಬಟ್, ಅವನು ಹೇಳಿದನಂತೆ ಇವನು ತಡೆದನಂತೆ ಅವನು ಯಾರು ಹೇಳೋಕೆ ಹೆಣ್ಣುಮಕ್ಕಳಿಗೆ ಯುನಿಫಾರ್ಮ್ ಬರಬೇಕು ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.
"ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರ ಉದ್ದೇಶ ಏನು? ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಆದರೆ ಹಿಜಬ್ ಮೊದಲಿನಿಂದಲೂ ಹಾಕುತ್ತಿದ್ದರು. ಪ್ರಕರಣ ಈ ನ್ಯಾಯಾಲಯದಲ್ಲಿದೆ. ಏನಾಗುತ್ತೆ ನೋಡೋಣ, ನಾನು ಓರ್ವ ವಕೀಲ ಹಾಗೂ ತಿಪಕ್ಷ ನಾಯಕನಾಗಿಯೇ ಹೇಳುತ್ತಿದ್ದೇನೆ. ಕೇಸರಿ ಶಾಲು ನಿನ್ನೆ, ಮೊನ್ನೆಯಿಂದ ಬಂದಿದೆ. ಹಿಜಬ್ ಹಿಂದಿನಿಂದಲೂ ಇದೆ. ಕರಾವಳಿಯು ಸಂಘ ಪರಿವಾರದ ಕೋಮುವಾದದ ಪ್ರಯೋಗಾಲಯವಾಗಿದೆ" ಎಂದು ಕಿಡಿಕಾರಿದ್ದಾರೆ.