ಸಾಗರ, ಫೆ 04 (DaijiworldNews/HR): ಕೊರೊನಾದಿಂದ ಮೃತಪಟ್ಟವರ ಪಟ್ಟಿ ಸಿದ್ಧಪಡಿಸುವಾಗ ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದ ಸಾಗರ ತಾಲ್ಲೂಕು ಕಚೇರಿ ಸಿಬ್ಬಂದಿ ಪರಿಹಾರ ನೀಡುವ ವಿಚಾರವಾಗಿ ಜೀವಂತವಿರುವ ವ್ಯಕ್ತಿಯ ಕುಟುಂಬದವರಿಗೆ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
ತಾಲ್ಲೂಕಿನ ಸೂರನಗದ್ದೆ ಗ್ರಾಮದ ವ್ಯಕ್ತಿಯೊಬ್ಬರು ಕೊರೊನಾದಿಂದ ಗುಣಮುಖರಾಗಿ ಮನಗೆ ಮರಳಿದ್ದರು. ಆದರೆ ಆರೋಗ್ಯ ಇಲಾಖೆ ಸಿದ್ಧಪಡಿಸಿದ್ದ ಕೋವಿಡ್ನಿಂದ ಮೃತಪಟ್ಟವರ ಪಟ್ಟಿಯಲ್ಲಿ ಅವರ ಹೆಸರು ಕೂಡ ಸೇರಿದ್ದು, ಇದರ ಅರಿವಿಲ್ಲದೆ ತಾಲ್ಲೂಕು ಕಚೇರಿ ಸಿಬ್ಬಂದಿ ವ್ಯಕ್ತಿಯ ಕುಟುಂಬದವರಿಗೆ ಕರೆ ಮಾಡಿ ಪರಿಹಾರ ಪಡೆಯಲು ಅಗತ್ಯ ದಾಖಲೆಗಳನ್ನು ನೀಡುವಂತೆ ಕೋರಿದ್ದರು.
ಇನ್ನು ಕೊರೊನಾದಿಂದದ ಗುಣಮುಖರಾದ ವ್ಯಕ್ತಿಯೇ ಕರೆ ಸ್ವೀಕರಿಸಿ 'ನಾನಿನ್ನೂ ಬದುಕಿದ್ದೇನೆ' ಎಂದು ತಿಳಿಸಿದ್ದು, ಇದರಿಂದ ಕರೆ ಮಾಡಿದ್ದ ತಾಲ್ಲೂಕು ಕಚೇರಿ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿರುವ ಘಟನೆ ನಡೆದಿದೆ.