ಉಡುಪಿ, ಫೆ 04(DaijiworldNews/MS): ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯ ಪರ ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ದ್ವನಿಯೆತ್ತಿದ್ದಾರೆ.
ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಟ್ವೀಟ್ ಮಾಡಿರುವ ಶಶಿ ತರೂರ್, " ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಧರಿಸಲು ಸ್ವತಂತ್ರರು ಎಂಬುದು ಭಾರತದ ಶಕ್ತಿಯಾಗಿದೆ. ಹಿಜಾಬ್ ಅನ್ನು ಅನುಮತಿಸದಿದ್ದರೆ, ಸಿಖ್ ಪೇಟದ ಬಗ್ಗೆ ಏನು? ಹಿಂದೂಗಳ ಹಣೆಯ ಗುರುತು? ಕ್ರಿಶ್ಚಿಯನ್ನರ ಶಿಲುಬೆಗೆ ಯಾಕೆ ಅನುಮತಿ ನೀಡಲಾಗಿದೆ ವಿದ್ಯಾರ್ಥಿನಿಯರನ್ನು ಒಳಗೆ ಬಿಡಿ,ಓದಲು ಬಿಡಿ, ವಸ್ತ್ರಧಾರಣೆಯ ನಿರ್ಧಾರ ಸಂತ್ರಸ್ಥರು ನಿರ್ಧರಿಸಲಿ ಎಂದು ತಿಳಿಸಿದ್ದಾರೆ.
ಇನ್ನು ಮೆಹಬೂಬಾ ಮುಫ್ತಿಯವರು, ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೀಡಿದ ಬೇಟಿ ಬಚಾವೋ ಬೇಟಿ ಪಢಾವೋ ಘೋಷವಾಕ್ಯಗಳೆಲ್ಲಾ ಬರೀ ಟೊಳ್ಳು. ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸಿದ್ದಕ್ಕೆ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲಾಗುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಕಾಲೇಜು ಮಾತ್ರವಲ್ಲದೆ,ಕುಂದಾಪುರ ಸರ್ಕಾರಿ ಕಾಲೇಜಿನಲ್ಲೂ ಈಗ ವಿವಾದ ಭುಗಿಲೆದ್ದಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜ್ ಗೆ ಆಗಮಿಸಿದ್ದರು.
ಈ ನಡುವೆ ಹಿಜಾಬ್ ವಿವಾದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಪ್ರಕರಣದ ವಿಚಾರಣೆ ಫೆ ೮ ಕ್ಕೆ ನಡೆಯಲಿದೆ.