ನವದೆಹಲಿ, ಫೆ. 03 (DaijiworldNews/SM): ಉಡುಪಿ ಜಿಲ್ಲೆಯಿಂದ ಆರಂಭಗೊಂಡಿರುವ ಹಿಜಾಬ್ ವಿವಾದ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಬಿಜೆಪಿ ಸರಕಾರ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುತ್ತಿದೆ ಎಂದು ಉಡುಪಿಯಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಕ್ರಾಟಿಕ್ ಪಾರ್ಟಿಯ ಅಧ್ಯಕ್ಷೆ ಮೆಹೆಬೂಬ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಬೇಟಿ ಬಚಾವೋ ಭೇಟಿ ಪಡಾವೋ ಬಿಜೆಪಿ ಸರಕಾರದ ಸುಳ್ಳು ಘೋಷಣೆಯಾಗಿದೆ. ಮುಸ್ಲಿಮ್ ಹೆಣ್ಣುಮಕ್ಕಳು ತಮ್ಮ ಉಡುಗೆ ತೊಡುಗೆಗಳಿಂದಾಗಿ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿದ್ದಾರೆ. ಮುಸ್ಲಿಮರನ್ನು ಕಡೆಗಣಿಸುವುದನ್ನು ಕಾನೂನುಬದ್ಧಗೊಳಿಸುವುದು ಗಾಂಧಿಯ ಭಾರತವನ್ನು ಗೋಡ್ಸೆಯ ಭಾರತವನ್ನಾಗಿ ಪರಿವರ್ತಿಸುವ ಇನ್ನೊಂದು ಹೆಜ್ಜೆಯಾಗಿದೆ ಎಂಬುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.