ಬೆಂಗಳೂರು, ಫೆ 03 (DaijiworldNews/HR): ಭಾರತವು ವಿಶ್ವಗುರು ಆಗಬೇಕು ಎನ್ನುತ್ತೀರಿ, ರಾಷ್ಟ್ರೀಯ ಶಿಕ್ಷಣದ ಮೂಲಕ ದೇಶವನ್ನು ಜ್ಞಾನಕಾಶಿ ಮಾಡುತ್ತೇವೆ ಎಂದು ಹೇಳುತ್ತೀರಿ, ಕರ್ನಾಟಕವು ಭಾರತದ ಶೈಕ್ಷಣಿಕ ರಾಜಧಾನಿ ಆಗಬೇಕು ಎನ್ನುತ್ತೀರಿ. ಆದರೆ 9,881 ಅತಿಥಿ ಉಪನ್ಯಾಸಕರನ್ನು ಕಿತ್ತೊಗೆಯುವ ಮೂಲಕ ಇದನ್ನು ಸಾಧನೆ ಮಾಡಲಾಗುತ್ತದೆಯೇ? ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸರಕಾರಕ್ಕೆ 6 ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್ಹಾಲ್ʼನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ ಎಂದು ಗುಡುಗಿದ್ದಾರೆ.
9,881 ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಒಳ್ಳೆಯದು ಮಾಡಿ ಎಂದು ಅಲವತ್ತುಕೊಂಡರೆ, ಏಕಾಎಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ? ಎಂದು ಪ್ರಶ್ನಿಸಿದ್ದಾರೆ.
ಭಾರತವು ವಿಶ್ವಗುರು ಆಗಬೇಕು ಎನ್ನುತ್ತೀರಿ, ರಾಷ್ಟ್ರೀಯ ಶಿಕ್ಷಣದ ಮೂಲಕ ದೇಶವನ್ನು ಜ್ಞಾನಕಾಶಿ ಮಾಡುತ್ತೇವೆ ಎಂದು ಹೇಳುತ್ತೀರಿ, ಕರ್ನಾಟಕವು ಭಾರತದ ಶೈಕ್ಷಣಿಕ ರಾಜಧಾನಿ ಆಗಬೇಕು ಎನ್ನುತ್ತೀರಿ. 9,881 ಅತಿಥಿ ಉಪನ್ಯಾಸಕರನ್ನು ಕಿತ್ತೊಗೆಯುವ ಮೂಲಕ ಇದನ್ನು ಸಾಧನೆ ಮಾಡಲಾಗುತ್ತದೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ದೇಶ ಕಟ್ಟುವುದರಲ್ಲಿ ಶಿಕ್ಷಣವೇ ನಿರ್ಣಾಯಕ. ಆ ಶಿಕ್ಷಣ ವ್ಯವಸ್ಥೆಗೆ ಗುರುವೇ ನಾಯಕ. ಆದರೆ ಇಂದು ಕಲಿಸುವ ಗುರುವು ದಿಕ್ಕಿಲ್ಲದೆ ಬೀದಿಯಲ್ಲಿ ನಿಂತಿದ್ದಾನೆ. ಸರಕಾರ ಹೇಳುವುದು ಒಂದು, ಮಾಡುವುದು ಇನ್ನೊಂದು, ಸರಕಾರಿ ಉನ್ನತ ಶಿಕ್ಷಣ ವ್ಯವಸ್ಥೆಯ ಕತ್ತು ಹಿಸುಕಿ, ವ್ಯವಸ್ಥಿತವಾಗಿ ಖಾಸಗಿ ವಲಯವನ್ನು ಬಲಪಡಿಸುವ, ಮಕ್ಕಳು-ಪೋಷಕರನ್ನು ಖಾಸಗಿಯವರ ಗುಲಾಮರನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆಯಾ? ಎನ್ನುವ ಅನುಮಾನ ಬರುತ್ತಿದೆ ಎಂದು ಹೇಳಿದ್ದಾರೆ.