ಬೆಂಗಳೂರು, ಫೆ 03(DaijiworldNews/MS): ಆಯಾ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿರುವ ಸಮವಸ್ತ್ರ ಹೊರತುಪಡಿಸಿ ವಿದ್ಯಾರ್ಥಿಗಳು ಕೇಸರಿ ಶಾಲಾಗಲಿ, ಹಿಜಾಬ್ ಆಗಲಿ ಧರಿಸಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ವಿಧಾನಸೌಧದ ಮುಂಭಾಗ ರಾಜ್ಯ ವಿಪತ್ತು ಸ್ಪಂದನಾಪಡೆಯ ನೂತನ ವಾಹನಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿದ್ಯಾ ಕೇಂದ್ರಗಳಲ್ಲಿ ವಿವಾದ ಬೇಡ. ಮತೀಯತೆ ಬಿಟ್ಟು ವಿಶಾಲ ಮನೋಭಾವವಿರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯವಾಗಿದೆ ಹೊರತು ಬೇರೇನೂ ಅಲ್ಲ. ಇಲ್ಲಿ ಧರ್ಮ, ಜಾತಿ ಮೀರಿ ಎಲ್ಲರೂ ಒಂದೇ ಎಂಬ ಭಾವನೆ, ಭಾರತ ಮಾತೆಯ ಮಕ್ಕಳು ಎಂಬ ರಾಷ್ಟ್ರಪ್ರೇಮ ಇರಬೇಕು ಎಂದು ಹೇಳಿದರು.
ಪೂಜೆ, ಧಾರ್ಮಿಕ ಕಾರ್ಯಗಳು ದೇವಾಲಯ, ಮಸೀದಿಗಳಲ್ಲಿರಲಿ. ಶಾಲೆಗಳಲ್ಲಿ ದೇಶದ ಏಕತೆ, ಸಮಗ್ರತೆ ಬಗ್ಗೆ ಸಂಸ್ಕಾರ ಇರಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ವಿಚಾರದಲ್ಲಿ ಮತೀಯ ಸಂಘಟನೆಗಳ ಬಗ್ಗೆ ಗಮನ ಹರಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಯಾರು ಏಕತೆಗೆ ಅಡ್ಡಗಾಲು ಹಾಕುತ್ತಾರೋ ಅವರನ್ನು ಸರಿಮಾಡಲಾಗುವ ಕೆಲಸ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.