ತೆಲಂಗಾಣ, ಫೆ 03 (DaijiworldNews/HR): ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ತವರಿನಲ್ಲಿರುವ ಆಸ್ತಿಗಾಗಿ ಮಹಿಳೆಯೊಬ್ಬಳು ತನ್ನ ತಂಗಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಮಹಿಳೆಯನ್ನು ವರಲಕ್ಷ್ಮಿ(36) ಎಂದು ಗುರುತಿಸಲಾಗಿದೆ.
ವರಲಕ್ಷ್ಮಿ ವಾಡಿಯಾರಾಮ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು ಪತಿಯಿಂದ ದೂರವಾಗಿದ್ದಳು. ವರಲಕ್ಷ್ಮಿಗೆ ರಾಜೇಶ್ವರಿ ಎಂಬ ಸಹೋದರಿಯಿದ್ದು, ಆಕೆ ಕೂಡ ವಿಚ್ಛೇದಿತಳು.
ಇನ್ನು ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದ್ದು, ಅಲ್ಲಿ 5 ಎಕರೆ ಜಮೀನಿತ್ತು. ಈ ಜಮೀನಿಗಾಗಿ ಅಕ್ಕ-ತಂಗಿ ನಡುವೆ ಕಲಹ ಆರಂಭವಾಗಿದೆ. ರಾಜೇಶ್ವರಿ ತನ್ನ ಸಹೋದರಿ ವರಲಕ್ಷ್ಮಿ ಮನೆಗೆ ಬಂದು ಆಸ್ತಿ ವಿಚಾರವಾಗಿ ಮಾತನಾಡಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.
ಜಗಳ ವಿಕೋಪಕ್ಕೆ ತಿರುಗಿ ವರಲಕ್ಷ್ಮಿಗೆ ಪೆಟ್ರೋಲ್ ಸುರಿದು ರಾಜೇಶ್ವರಿ ಬೆಂಕಿ ಹಚ್ಚಿದ್ದಾಳೆ. ಈ ವೇಳೆ ರಾಜೇಶ್ವರಿಗೂ ಬೆಂಕಿ ತಗುಲಿದೆ. ತೀವ್ರವಾದ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿ ತಲುಪಿದ್ದ ವರಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ರಾಜೇಶ್ವರಿ ಕೂಡ ಶೇ.80ರಷ್ಟು ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ.