ಬೆಳಗಾವಿ, ಫೆ 03 (DaijiworldNews/MS): ಕರ್ನಾಟಕದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹವಾ ಮುಗಿದಿದೆ. ಅವರ ರಾಜಕೀಯ ಯುಗಾಂತ್ಯವಾಗಿದ್ದು ಹೀಗಾಗಿ ನಾಯಕತ್ವ ಬದಲಾವಣೆ ಅಗತ್ಯ, ಅನಿವಾರ್ಯ ಆಗಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, " ದೇಶದಲ್ಲಿ ವಾಜಪೇಯಿ ನಂತರ ಮೋದಿ ಬಂದ ರೀತಿ ಬದಲಾವಣೆ ನಡೆಯಬೇಕಾದ ಅಗತ್ಯವಾಗಿದೆ, ಹೀಗಾಗಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಪರ್ಯಾಯ ಅಂದರೆ ಎರಡನೇ ನಾಯಕತ್ವದ ಅಗತ್ಯವಿದೆ. ಯಡಿಯೂರಪ್ಪ ಅಲ್ಲದೆ ಇನ್ನೂ 3-4 ಜನರಿದ್ದಾರೆ ಅವರ ನಾಯಕತ್ವವೂ ಮುಗಿಯುತ್ತಾ ಬಂದಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಬೊಮ್ಮಾಯಿ ಬದಲಾವಣೆ ಆಗುತ್ತಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ಪಕ್ಷಕ್ಕೆ ಎರಡನೇ ನಾಯಕತ್ವ ಎಂದು ಹೇಳುತ್ತಿದ್ದೇನೆ. ಪಕ್ಷದ ವರಿಷ್ಠರು 2023ರ ಚುನಾವಣೆಗೆ ಒಳ್ಳೆ ಟೀಮ್ ರಚಿಸಿ ಮತ್ತೆ ಅಧಿಕಾರಕ್ಕೆ ಬರುವ ಪ್ಲ್ಯಾನ್ ಮಾಡಿ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ
ಸಿಎಂ ಅವರು ದೆಹಲಿಯಲ್ಲಿ ಸಂಸದರ ಸಭೆ ಮಾಡಬೇಕು. ಅಧಿವೇಶನ ಹಿನ್ನೆಲೆ ರಾಜ್ಯದ ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಮಾಡಬೇಕು. ಕೇಂದ್ರದ ಮೇಲೆ ಒತ್ತಡ ತರಲು ಸಹಜವಾಗಿ ಇದೊಂದು ಪದ್ಧತಿ ಇದೆ. ಸಂಸದರ ಸಭೆ ಹಿನ್ನೆಲೆ ದೆಹಲಿಗೆ ಹೋಗುತ್ತಿರಬಹುದು ಎಂದು ಸಿಎಂ ದೆಹಲಿಗೆ ಹೋಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು.