ಮುಂಬೈ, ಫೆ 02(DaijiworldNews/MS): ಎನ್ಸಿಬಿ ಮುಂಬೈ ವಲಯದ ಮಾಜಿ ಪ್ರಾದೇಶಿಕನಿರ್ದೇಶಕ ಸಮೀರ್ ವಾಂಖೆಡೆ ಒಡೆತನದ ನವಿ ಮುಂಬೈ ಮೂಲದ ಹೋಟೆಲ್ ಮತ್ತು ಬಾರ್ಗೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಈ ಪರವಾನಗಿಯನ್ನು ತಪ್ಪು ಮಾಹಿತಿ ಹಾಗೂ ವಂಚನೆಯ ಮೂಲಕ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಶ್ ನರ್ವೆಕರ್ ತಮ್ಮ ಆದೇಶದಲ್ಲಿ ಮಂಗಳವಾರ ತಿಳಿಸಿದ್ದಾರೆ.
ಬಾರ್ ಅನ್ನು ಸೀಲ್ ಮಾಡಿ ಸ್ಟಾಕ್ ಅನ್ನು ವಶಪಡಿಸಿಕೊಳ್ಳಲಿದೆ ಎಂದು ಹಿರಿಯ ಅಬಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ ಕಳೆದ ವರ್ಷ ನವೆಂಬರ್ನಲ್ಲಿ ವಾಂಖೆಡೆ ಅವರು ನವಿ ಮುಂಬೈನ ವಾಶಿಯಲ್ಲಿ ಪರ್ಮಿಟ್ ರೂಮ್ ಮತ್ತು ಬಾರ್ ಅನ್ನು ಹೊಂದಿದ್ದರು ಎಂದು ಹೇಳಿಕೊಂಡಿದ್ದರು, ಅವರು ಅಪ್ರಾಪ್ತರಾಗಿದ್ದಾಗ 1997 ರಲ್ಲಿ ಪರವಾನಗಿ ಪಡೆದಿದ್ದರು ಮತ್ತು ಸರ್ಕಾರಿ ಉದ್ಯೋಗದಲಿದ್ದರೂ ವಾಂಖೆಡೆ ಪರ್ಮಿಟ್ ರೂಮ್ ನಡೆಸಲು ಲೈಸೆನ್ಸ್ ನ್ನು ಪಡೆದಿರುವುದು ಸೇವೆಯ ನಿಯಮಗಳಿಗೆ ವಿರುದ್ಧವಾದದ್ದು ಎಂದು ಮಲೀಕ್ ಹೇಳಿದ್ದರು. ವಾಂಖೆಡೆ ಈ ಬಳಿಕ ಸಚಿವರ ಹೇಳಿಕೆಗಳನ್ನು ಅಲ್ಲಗಳೆದಿದ್ದರು.