ಬೆಂಗಳೂರು, ಫೆ 02(DaijiworldNews/KP): ಬಜೆಟ್ನಲ್ಲಿ ಮಂಡಿಸಿದ ನದಿ ಜೋಡಣೆ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ನೀರು ಹಂಚಿಕೆ ವಿಚಾರದಲ್ಲಿ ತೊಂದರೆಯಾದರೆ ನಾವು ಈ ಯೋಜನೆಗೆ ಅನುಮತಿ ಕೊಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಕೇಂದ್ರ ಬಜೆಟ್ ಮಂಡನೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಪ್ರಗತಿಪರ ಬಜೆಟ್, ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಹಾಕಲಾಗುತ್ತಿದ್ದು, ಡಿಜಿಟಲ್ ಮುಖಾಂತರ ಶಿಕ್ಷಣವನ್ನು ಕೊಡಿಸುವ ನಿರ್ಧಾರವನ್ನು ಮಾಡಿದ್ದಾರೆ. ಅಲ್ಲದೆ ಎಸಿ ಎಸ್ಟಿ ರೈತರಿಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ಈ ಎಲ್ಲ ಯೋಜನೆಯು ದೂರ ದೃಷ್ಟಿಯಿಂದ ದೇಶದ ಏಳಿಗೆಗಾಗಿ ಜಾರಿ ಮಾಡಲಾಗಿದೆ ಎಂದರು.
ನದಿ ಜೋಡಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಅನುಮತಿ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ, ಆದರೆ ನದಿ ಜೋಡಣೆ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಬಾರದು, ಅಲ್ಲದೆ ಹಂಚಿಕೆ ವಿಚಾರದಲ್ಲಿ ಸಮಸ್ಯೆಗಳು ಎದುರಾದರೆ ನಾವು ಈ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದರು.
ಇನ್ನು ರಾಹುಲ್ ಗಾಂಧಿ ಹೇಳಿಕೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿಯವರಿಗೆ ಬಜೆಟ್ನಲ್ಲಿ ಏನಿದೆಯೆಂದು ಮಾಹಿತಿಯಿಲ್ಲ, ಹಾಗಿದ್ದರೂ ಕೂಡ ಬಜೆಟ್ ಮಂಡನೆಗೆ ಮುನ್ನವೇ ಇದೊಂದು ನಿರಾಶದಾಯಕ ಬಜೆಟ್ ಎಂದು ಹೇಳುತ್ತಿದ್ದಾರೆ. ಬಜೆಟ್ ಮಂಡನೆಯ ಅನುಭವ ಇಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದರು.