ಬೆಂಗಳೂರು, ಫೆ 02(DaijiworldNews/KP): ಯುವಕನೊಬ್ಬ ಉದ್ದೇಶಪೂರ್ವಕವಾಗಿ ತನ್ನ ಐಷಾರಾಮಿ ಆಡಿ ಕಾರನ್ನು ಚಲಾಯಿಸಿ ಹತ್ಯೆಗೈದ ಶ್ವಾನ ಲಾರಾ ಅಂತ್ಯಕ್ರಿಯೆಯಲ್ಲಿ ಸ್ಯಾಂಡಲ್ವುಡ್ ನಟಿ, ಮಾಜಿ ಸಂಸದೆ ರಮ್ಯಾ ಸೇರಿದಂತೆ ನೂರಾರು ಪ್ರಾಣಿ ಪ್ರೇಮಿಗಳು ಪಾಲ್ಗೊಂಡಿದ್ದರು.
ಮಂಗಳವಾರ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಸುಮನಹಳ್ಳಿಯ ಪಶು ಸ್ಮಶಾನಕ್ಕೆ ತಂದು ಹಿಂದೂ ಸಂಪ್ರದಾಯದಂತೆ ಲಾರಾ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಶ್ವಾನಕ್ಕೆ ಊಟ ಹಾಕಿ ಬೆಳೆಸಿದ ಗಾಯತ್ರಿ, ನಟಿ ರಮ್ಯಾ ಸೇರಿದಂತೆ ಹಲವಾರು ಶಾಲಾ ಮಕ್ಕಳು ಶೋಕಾಚರಣೆಯಲ್ಲಿ ಪ್ರಾಣಿ ಹಿಂಸೆಯ ವಿರುದ್ದ ಭಿತ್ತಿಪತ್ರವನ್ನು ಹಿಡಿದು ಯುವಕನ ಕೃತ್ಯವನ್ನು ಖಂಡಿಸಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ನಟಿ, ಮಾಜಿ ಸಂಸದೆ ರಮ್ಯಾ, ಮನುಷ್ಯರು ತಪ್ಪು ಮಾಡುತ್ತಾರೆ, ಅಪಘಾತಗಳು ಆಗುವುದು ಸಹಜ, ಆದರೆ ಈ ಪ್ರಕರಣ ಬೇರೆ ರೀತಿಯದ್ದು ಉದ್ದೇಶಪೂರ್ವಕವಾಗಿ ಶ್ವಾನದ ಮೇಲೆ ಕಾರು ಓಡಿಸಲಾಗಿದೆ, ಈ ಕೃತ್ಯ ನಮಗೆ ಸಹಿಸಲಾಗುತ್ತಿಲ್ಲ, ನಮ್ಮ ದೇಶದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಕಾನೂನುಗಳು ಕಠಿಣವಾಗಿಲ್ಲ. ಆರೋಪಿಗಳು 50 ರೂಪಾಯಿ ಕೊಟ್ಟು ಹೊರಗೆ ಬರುತ್ತಾರೆ ಎಂದರು.
ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು, ಇನ್ನು ಪ್ರಾಣಿ ಹಿಂಸೆಯ ವಿರುದ್ಧ ಕಾನೂನನ್ನು ಬಲಪಡಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು ಉದ್ದೇಶಪೂರ್ವಕವಾಗಿ ತನ್ನ ಐಷಾರಾಮಿ ಆಡಿ ಕಾರನ್ನು ಲಾರಾನ ಮೇಲೆ ಓಡಿಸಿ ವಿಕೃತಿ ಮೆರೆದಿದ್ದ ಆರೋಪಿಯನ್ನು ಕೈಗಾರಿಕೋದ್ಯಮಿಯೊಬ್ಬರ ಪುತ್ರ ಆದಿ(23) ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಜಯನಗರ ನಿವಾಸಿ ಎಂ.ಎಸ್.ಬದ್ರಿ ಪ್ರಸಾದ್ ಎಂಬುವರು ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಅನ್ವಯ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಸೆಕ್ಷನ್ 11, ಐಪಿಸಿ ಸೆಕ್ಷನ್ 428 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಇನ್ನು ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆದರೆ ರಾಜಕೀಯ ಕುಟುಂಬಕ್ಕೆ ಸೇರಿದವನಾಗಿರುವುದರಿಂದ ಅದೇ ದಿನ ಜಾಮೀನು ಮೇಲೆ ಬಿಡುಗಡೆ ಹೊಂದಿದ್ದಾರೆ.