ಮೈಸೂರು, ಫೆ 02(DaijiworldNews/KP): ಇತ್ತೀಚಿನ ದಿನಗಳಲ್ಲಿ ಹೆಣ್ಣು ಅಬಲೆಯಲ್ಲ ಹಾಗೂ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಬದಲಾಗಿ ರಾಷ್ಟ್ರ ಮತ್ತು ಸಮಾಜದ ರಕ್ಷಣೆಗೆ ಬದ್ದ ಎಂದು ನಿರೂಪಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಇಂದು ಮೈಸೂರಿನ, ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ನಡೆದ, 45ನೇ ತಂಡದ ಆರಕ್ಷಕ ಉಪನಿರೀಕ್ಷಕರ (ಸಿವಿಲ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಹಳ ಜನ ಹೇಳುತ್ತಾರೆ ಪೊಲೀಸ್ ಠಾಣೆಗಳಿಗೆ ಮರ್ಯಾದಸ್ಥರು ಹೋಗವ ಸ್ಥಳವಲ್ಲ ಅಂತಾ. ಪೊಲೀಸ್ ಠಾಣೆಯಲ್ಲಿ ಇರುವವರು ಉನ್ನತ ಶಿಕ್ಷಣ ಪಡೆದುಕೊಂಡು ಬಂದಿರುತ್ತಾರೆ, ಅಲ್ಲದೆ ಶಿಕ್ಷಣ, ತರಬೇತಿ ಪಡೆದವರು ಯಾರಿಗೂ ಹಿಂಸೆ ಕೊಡುವುದಿಲ್ಲ ಎಂದರು.
ಇನ್ನು ಈ ಬಾರಿ ಸುಮಾರು 228 ಪ್ರಶಿಕ್ಷಣಾರ್ಥಿಗಳು ಇಂದು ತರಬೇತಿ ಮುಗಿಸಿ ಸೇವೆಗೆ ಸಜ್ಜಾಗಿದ್ದು, ಅದರಲ್ಲೂ ಪುರುಷ ಪ್ರಶಿಕ್ಷಣಾರ್ಥಿಗಳಿಗೆ ಸರಿಸಾಟಿಯಾಗಿ 45 ಮಂದಿ ಮಹಿಳೆಯರು ತರಬೇತಿ ಮುಗಿಸಿ, ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ ಎಂದು ಅವರನ್ನು ಪ್ರಶಂಸಿಸಿದರು.
ಹೆಣ್ಣು ಮಕ್ಕಳು ಅಬಲೆಯಲ್ಲ ಹಾಗೂ ಕೇವಲ ಆಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಬದಲಾಗಿ ರಾಷ್ಟ್ರ ಮತ್ತು ಸಾರ್ವಜನಿಕರ ರಕ್ಷಣೆಗೂ ಸಹ ಆಕೆ ಬದ್ದ ಎಂದು ನಿರೂಪಿಸಿದ್ದಾರೆ ಎಂದರು.
ತರಬೇತಿ ಮುಗಿಸಿ ಸೇವೆಗೆ ತೆರಳುತ್ತಿರುವ ತಾವುಗಳು ಸಮಾಜವಿರೋಧಿ ಶಕ್ತಿಗಳಿಗೆ ಭಯ ಹುಟ್ಟಿಸಬೇಕು. ಅದೇ ಸಮಯದಲ್ಲಿ ಕಾನೂನು ಗೌರವಿಸುವ ನಾಗರಿಕರಿಗೆ ಅಭಯ ನೀಡುವ ಕೆಲಸ ಮಾಡಬೇಕು, ಕೆಲವು ಪೊಲೀಸರು ಅನಿಷ್ಟತನ ಮಾಡಿದಾಗ ಉತ್ತಮ ನಡವಳಿಕೆಯವರು ತಲೆ ತಗ್ಗಿಸಬೇಕಾಗಿದೆ. ನೀವು ಒಮ್ಮೆಯೂ ತಲೆ ತಗ್ಗಿಸುವ ಕೆಲಸ ಮಾಡಬೇಡಿ. ನೀವು ರಕ್ಷಕರಾಗಬೇಕೆ ಹೊರತು ಯಾರ ಗುಲಾಮರಾಗಬಾರದು ಎಂದು ಕಿವಿ ಮಾತು ಹೇಳಿದರು.