ಲಕ್ನೋ, ಫೆ 02(DaijiworldNews/MS): ಉತ್ತರ ಪ್ರದೇಶ ಚುನಾವಣಾ ಕಾವು ದಿನದಿನಕ್ಕೆ ಹೆಚ್ಚುತ್ತಿದ್ದು, ಭಾರೀ ಚರ್ಚೆಯ ಬಳಿಕ ಬಿಜೆಪಿಯು ರಾಜಧಾನಿ ಲಕ್ನೋ ದ ಎಲ್ಲಾ ಒಂಬತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಆದರೆ ಆಕಾಂಕ್ಷಿಗಳಾದ ಸಮಾಜವಾದಿ ಪಕ್ಷದ ವರಿಷ್ಟ, ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಮತ್ತು ಬಿಜೆಪಿ ಸಂಸದ ರೀಟಾ ಬಹುಗುಣ ಜೋಶಿ ಅವರಿಗೆ ಟಿಕೆಟ್ ಕೈ ತಪ್ಪಿದೆ.
ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಇತ್ತೀಗಷ್ಟೇ ಬಿಜೆಪಿ ಸೇರಿದ್ದರು. ಇವರು ಲಕ್ನೋ ಕಂಟೋನ್ಮೆಂಟ್ ನಲ್ಲಿ ಟಿಕೆಟ್ ಬಯಸಿದ್ದರು. ಇದೇ ಕ್ಷೇತ್ರದಲ್ಲಿ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್ ಸಿಂಗ್ ಕೂಡಾ ಟಿಕೆಟ್ ಬಯಸಿದ್ದರು. ಆದರೆ ಬಿಜೆಪಿ ಸಚಿವ ಬ್ರಿಜೇಶ್ ಪಾಠಕ್ ಗೆ ಟಿಕೆಟ್ ನೀಡಿದೆ.
ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್ ಸಿಂಗ್ ಅವರ ಸ್ವಯಂ ನಿವೃತ್ತಿಯನ್ನು ಇಂದು ಕೇಂದ್ರ ಸರ್ಕಾರ ಅಂಗೀಕರಿಸಿದ್ದು, ಅವರಿಗೆ ಸರೋಜಿನಿ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷ ಟಿಕೆಟ್ ನೀಡಿದೆ. ರಾಜ್ಯದ ಮಹಿಳಾ ಕಲ್ಯಾಣ ಖಾತೆ ರಾಜ್ಯ ಸಚಿವೆ ಸ್ವಾತಿ ಸಿಂಗ್ ಮತ್ತು ಅವರ ಪತಿ ದಯಾಶಂಕರ್ ಸಿಂಗ್ ಇಬ್ಬರೂ ಈ ಸೀಟಿನ ಮೇಲೆ ಕಣ್ಣಿಟ್ಟಿದ್ದರು.
ಲಕ್ನೋ ಕಂಟೋನ್ಮೆಂಟ್ ಪಕ್ಷಕ್ಕೆ ಸುರಕ್ಷಿತ ಸ್ಥಾನ ಎಂದು ಪರಿಗಣಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರೀಟಾ ಬಹುಗುಣ ಜೋಶಿ ಅವರು ಅಪರ್ಣಾ ಯಾದವ್ ಅವರನ್ನು ಸೋಲಿಸಿದ್ದರು.
ಕಳೆದ ರಾಜ್ಯ ಚುನಾವಣೆಯಲ್ಲಿ ಲಕ್ನೋದ ಒಂಬತ್ತು ಸ್ಥಾನಗಳ ಪೈಕಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು.