ಹೈದರಾಬಾದ್, ಫೆ 02(DaijiworldNews/KP): ನಾನು ಪ್ರಧಾನಿಯಾಗಲು ಹೋರಾಡುತ್ತಿಲ್ಲ, ಬದಲಾಗಿ ರಾಷ್ಟ್ರಮಟ್ಟದಲ್ಲಿ ನಾಯಕತ್ವದಲ್ಲಿ ಬದಲಾವಣೆ ತರಲು ಹೋರಾಡುತ್ತಿದ್ದೇನೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳೆಂದು ಕರೆಯಲ್ಪಡುವ ಎರಡೂ ಪಕ್ಷಗಳು ವಿಫಲವಾಗಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕತ್ವದಲ್ಲಿ ಬದಲಾವಣೆಯ ಅಗತ್ಯವಿದೆ ಎನ್ನುವ ಮೂಲಕ ರಾಷ್ಟ್ರೀಯ ನಾಯಕತ್ವವನ್ನು ವಹಿಸಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸಹಕಾರಿ ಒಕ್ಕೂಟದ ಹಾದಿಯಲ್ಲಿ ಕೆಲಸ ಮಾಡಲು ವಿಫಲವಾಗಿರುವುದರಿಂದ ಚರ್ಚೆಯ ಅಗತ್ಯದ ಜೊತೆಗೆ ವಾಸ್ತವವಾಗಿ ನಮಗೆ ಹೊಸ ಸಂವಿಧಾನದ ಅಗತ್ಯವಿದೆ. ಇನ್ನು ಉತ್ತರ ಪ್ರದೇಶದಲ್ಲಿ ಬಿಜೆಪಿ ಪುನರಾಯ್ಕೆಯಾದರೆ ಅವರಿಗೆ ದುರಹಂಕಾರ ಹೆಚ್ಚಾಗಿ, ಅವರ ವರ್ಚಸ್ಸು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಟೀಕಿಸಿದರು.
ಇನ್ನು ರಾಷ್ಟ್ರಮಟ್ಟದಲ್ಲಿ ನಾಯಕತ್ವ ಬದಲಾವಣೆಗಾಗಿ ಅನೇಕ ನಾಯಕರನ್ನು ಭೇಟಿ ಮಾಡಿದ್ದೇನೆ, ನಿನ್ನೆಯೂ ಕೂಡ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಿದ್ದೇನೆ. ಆದರೆ ದೇಶದ ಯುವಜನತೆ ಎಚ್ಚೆತ್ತುಕೊಂಡು ಬದಲಾವಣೆ ತರಲು ಮನಸ್ಸು ಮಾಡಬೇಕಿದೆ, ಇದಕ್ಕಾಗಿ ನಾನು ಖಂಡಿತವಾಗಿಯೂ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.
2019ರ ಲೋಕ ಸಭೆ ಚುನಾವಣೆಗೂ ಮುನ್ನ ಚಂದ್ರಶೇಖರ್ ಅವರು ಕೇರಳ ಸಿಎಂ ಪಿಣರಾಯ ವಿಜಯನ್, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಮತ್ತು ಮಮತಾ ಬ್ಯಾನರ್ಜಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಕೇಂದ್ರದಿಂದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತೃತೀಯ ರಂಗ ರಚಿಸುವಂತೆ ಒತ್ತಾಯಿಸಿದ್ದರು, ಆದರೆ ಇತ್ತೀಚೆಗೆ ಚಂದ್ರಶೇಖರ್ ಕೇಂದ್ರ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗುವ ಮೂಲಕ ತೃತೀಯ ರಂಗ ರಚನೆಯ ಬಗ್ಗೆ ಊಹಾಪೋಹಗಳು ಹುಟ್ಟುಹಾಕಿದೆ.