ಲಕ್ನ್ನೋ, ಫೆ 02(DaijiworldNews/MS): ಮಹತ್ವದ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ವಿರುದ್ಧ ಕಣಕ್ಕಿಳಿಸಲಾಗಿದ್ದ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹಿಂಪಡೆದುಕೊಂಡಿದೆ.
ಮೈನ್ಪುರಿಯ ಕರ್ಹಾಲ್ ಹಾಗೂ ಇಟಾವಾದ ಜಸ್ವಂತ್ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಫೆಬ್ರವರಿ 20 ರಂದು ರಾಜ್ಯದಲ್ಲಿ ಮೂರನೇ ಹಂತದ ಮತದಾನದಲ್ಲಿ ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ
ಅಖಿಲೇಶ್ ಯಾದವ್ ಅವರು ಕರ್ಹಾಲ್ನಿಂದ ಸ್ಪರ್ಧಿಸುತ್ತಿದ್ದು, ಶಿವಪಾಲ್ ಅವರು ಜಸ್ವಂತ್ನಗರದಿಂದ ಕಣಕ್ಕಿಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಎಸ್ಪಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.