ಇಟಾನಗರ, ಫೆ 02(DaijiworldNews/MS): ಅರುಣಾಚಲ ಪ್ರದೇಶದಿಂದ ಚೀನಾ ಸೇನೆಯು ಅಪಹರಿಸಿದ್ದ ಯುವಕ ಮತ್ತೆ ತನ್ನ ಕುಟುಂಬವನ್ನು ಸೇರಿದ್ದು, ಆದರೆ ಚೀನಾ ಸೇನೆ ಆತನಿಗೆ ವಿದ್ಯುತ್ ಶಾಕ್ ಸೇರಿ ಹಲವಾರು ರೀತಿಯ ಚಿತ್ರಹಿಂಸೆ ನೀಡಿತ್ತು ಎಂದು ತಿಳಿದುಬಂದಿತ್ತು.
ಜನವರಿ 18 ರಂದು ಮಿರಾಮ್ (17) ತನ್ನ ಸ್ನೇಹಿತ ಜಾನಿ ಯಾಯಿಂಗ್ ಜೊತೆ ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿಯ ಲುಂಗ್ಟಾ ಜೋರ್ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದ ವೇಳೆ ಚೀನಾ ಸೇನೆಯು ಮಿರಾಮ್ ಅವರನ್ನು ಅಪಹರಿಸಿತ್ತು.ಎರಡು ದೇಶಗಳ ನಡುವೆ ಮಾತುಕತೆ ನಡೆದ ಬಳಿಕ ಚೀನ ಸೇನೆ ಜ.27ರಂದು ಭಾರತದ ಸೇನೆಗೆ ಹಸ್ತಾಂತರಿಸಿತ್ತು. ಸೇನೆಯೂ ಸೋಮವಾರ ಸಂಜೆ ಅರುಣಾಚಲ ಪ್ರದೇಶದ ಅಪ್ಪರ್ ಸಯಾಂಗ್ ಜಿಲ್ಲೆಯ ಟ್ಯುಟಿಂಗ್ನಲ್ಲಿರುವ ಆತನ ಹೆತ್ತವರಿಗೆ ಹಸ್ತಾಂತರಿಸಲಾಯಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಯುವಕನ ತಂದೆ ಒಪಾಂಗ್ ತಾರೋನ್ ತನ್ನ ಪುತ್ರ ಮಾನಸಿಕ ಜರ್ಝರಿತವಾಗಿದ್ದು ಘಟನೆಯ ಬಳಿಕ ಸಂಪೂರ್ಣ ಭಯಭೀತನಾಗಿದ್ದಾನೆ. ಚೀನಿ ಯೋಧರ ಕಸ್ಟಡಿಯಲ್ಲಿದ್ದ ವೇಳೆ ತರೋನ್ನ ಕಣ್ಣಿಗೆ ಬಟ್ಟೆ ಕಟ್ಟಿ ತೀವ್ರವಾಗಿ ಥಳಿಸಲಾಗಿತ್ತು. ಬೆನ್ನಿಗೆ ತೀವ್ರವಾಗಿ ಒದೆಯಲಾಗಿದೆ. ವಿದ್ಯುತ್ ಆಘಾತವನ್ನೂ ನೀಡಲಾಗಿದೆ. ಈ ದಿನಗಳಲ್ಲಿ ಆತನ ಕೈಗಳನ್ನು ಕಟ್ಟಲಾಗಿತ್ತು ಎಂದೂ ದೂರಿದ್ದಾರೆ.