ನವದೆಹಲಿ, ಫೆ 01 (DaijiworldNews/KP): ಇದು ಆಶ್ಚರ್ಯಕರವಾಗಿ ನಿರಾಶಾದಾಯಕ ಬಜೆಟ್ ಆಗಿದ್ದು, ಈ ಬಾರಿ ರಕ್ಷಣೆ ಅಥವಾ ಸಾರ್ವಜನಿಕರು ಎದುರಿಸುತ್ತಿರುವ ಕಷ್ಟಗಳಿಗೆ ಯಾವುದೇ ಆದ್ಯತೆಯನ್ನು ನೀಡಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಬಜೆಟ್ ಕುರಿತು ಮಾತನಾಡಿದ ಅವರು, ನಾವು ಭೀಕರ ಹಣದುಬ್ಬರವನ್ನು ಎದುರಿಸುತ್ತಿದ್ದೇವೆ. ಬಜೆಟ್ನಲ್ಲಿ ಮಧ್ಯಮ ವರ್ಗದವರಿಗೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ, ಇಂತಹ ಸಂದರ್ಭದಲ್ಲೂ ಡಿಜಿಟಲ್ ಕರೆನ್ಸಿಗೆ ಪೂರಕವಾದ ದಿಕ್ಕಿನಲ್ಲಿ ಸರ್ಕಾರ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇದು ಸಮಂಜಸ ಎನಿಸಿದರೂ, ಸಾಮಾನ್ಯ ನಾಗರಿಕರ ಅಗತ್ಯತೆಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ಬಜೆಟ್ ತೋರಿಲ್ಲ ಎಂದು ಹೇಳಿದರು.
ಇದು ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪೂರಕವಾದ ಯಾವುದೇ ಅಂಶಗಳು ಈ ಬಾರಿಯ ಬಜೆಟ್ನಲ್ಲಿ ಉಲ್ಲೇಖಿಸಿಲ್ಲ, ಇನ್ನು ’ಅಚ್ಚೇ ದಿನ್' ಎಂಬ ಪದ ಇಲ್ಲಿ ಮರೀಚಿಕೆಯಾಗಿದೆ, ’ಅಚ್ಚೇ ದಿನ್' ಬರಲು ನಾವು ಇನ್ನೂ 25 ವರ್ಷ ಕಾಯಬೇಕಾಗಿದೆ ಎಂದು ಟೀಕಿಸಿದರು.