ಬೆಂಗಳೂರು, ಫೆ 01(DaijiworldNews/MS): ಕೇಂದ್ರದ ಬಜೆಟ್ ಮಂಡನೆ ಎನ್ನುವುದು ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ , "ಈಗಾಗಲೇ ಎರಡು ವರ್ಷಗಳಿಂದ ಕೋವಿಡ್, ಲಾಕ್ಡೌನ್ಗಳಿಂದಾಗಿ ಜನರ ಆರ್ಥಿಕ ಸ್ಥಿತಿ ಹಾಗೂ ಬದುಕು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ.ಬಡ ಹಾಗೂ ಮಧ್ಯಮವರ್ಗದ ಜನತೆ ಸಣ್ಣ ನಿಟ್ಟುಸಿರು ಬಿಡುವಂತಹ ಯಾವೊಂದು ಕಾರ್ಯಕ್ರಮವಿಲ್ಲದೆ ಜನರ ಬವಣೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ" ಎಂದು ಆರೋಪಿಸಿದೆ.
"ಕೇಂದ್ರದ ಬಜೆಟ್ ಮಂಡನೆ ಎನ್ನುವುದು ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ! ಕೇವಲ ಒಂದೂವರೆ ಗಂಟೆಯಲ್ಲೇ ಮುಗಿದುಹೋದ ಬಜೆಟ್ ಭಾಷಣವೇ ಇದಕ್ಕೆ ಸಾಕ್ಷಿ. ಜನರ ಸುಲಿಗೆ ಮಾಡಿ ಜಿಎಸ್ಟಿ ತೆರಿಗೆ ಸಂಗ್ರಹಿಸಿದ್ದನ್ನೇ ಹೆಗ್ಗಳಿಕೆ ಎಂಬಂತೆ ಹೇಳಿಕೊಳ್ಳಲು ಮಾತ್ರ ಈ ಬಜೆಟ್ ಭಾಷಣ ಸೀಮಿತವಾಗಿದೆ" ಎಂದು ಲೇವಡಿ ಮಾಡಿದೆ.
"ಕೇಂದ್ರದ ಬಜೆಟ್ 2022 ರಲ್ಲಿ ಯಾವುದೇ ತೆರಿಗೆ ಪರಿಹಾರವನ್ನು ನೀಡದೆ, ಸಂಬಳ ಪಡೆಯುವ ವರ್ಗದ ಬಗ್ಗೆ ಸರ್ಕಾರ ತನ್ನ ಕಾಳಜಿಯ ಕೊರತೆಯನ್ನು ಮತ್ತೊಮ್ಮೆ ತೋರಿಸಿದೆ" ಎಂದು ಟೀಕಿಸಿದೆ.