ನವದೆಹಲಿ, ಫೆ 01 (DaijiworldNews/KP): ದಕ್ಷಿಣ ಭಾರತದ ರಾಜ್ಯಗಳಿಗೆ ಅನುಕೂಲವಾಗಲಿರುವ ಮಹತ್ವಾಕಾಂಕ್ಷೆ ನದಿ ಜೋಡಣೆ ಯೋಜನೆಗಳಿಗೆ ಈ ಬಾರಿಯ ಬಜೆಟ್ನಲ್ಲಿ ಸಮ್ಮತಿ ನೀಡಲಾಗಿದ್ದು, ಬಹುದಿನಗಳ ಬೇಡಿಕೆಯಾಗಿದ್ದ ನರ್ಮದಾ, ಪೆನ್ನಾರ್, ಕಾವೇರಿ, ಗೋದಾವರಿ, ಹಾಗೂ ಕೃಷ್ಣಾ ನದಿಗಳ ಜೋಡಣೆಗೆ ಯೋಜನೆಯನ್ನು 2022ರ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಗೋದಾವರಿ ನದಿಯ ಹೆಚ್ಚುವರಿ ನೀರು ಬಂಗಾಳಕೊಲ್ಲಿ ಸಮುದ್ರದ ಪಾಲಾಗುತ್ತಿದ್ದು, ಈ ಹೆಚ್ಚುವರಿ ನೀರನ್ನು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
ಇದು ದೇಶದ ಮೊದಲ ಅಂತಾರಾಜ್ಯ ನದಿ ಜೋಡಣೆ ಯೋಜನೆಯ ಕೆನ್- ಬೇಟ್ವಾ ಅಡಿಯಲ್ಲಿ 44,605 ಕೋಟಿ ರೂ. ವೆಚ್ಚದಲ್ಲಿ 9.05 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಸುಮಾರು 65 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ಇನ್ನು ದೇಶದಲ್ಲಿ ಒಟ್ಟು 30 ನದಿ ಜೋಡಣೆ ಯೋಜನೆಗಳನ್ನು ಕೇಂದ್ರ ಸರಕಾರ ಕೈಗೊಂಡಿದ್ದು, ಆ ಪೈಕಿ ಗೋದಾವರಿ- ಕಾವೇರಿ, ಕೆನ್-ಬೆತ್ವಾ, ದಮನ್ ಗಂಗಾ- ಪಿಂಜಲ್, ತಾಪಿ- ನರ್ಮದಾ ಸೇರಿ 5 ಯೋಜನೆಗಳು ಮುಂಚೂಣಿಯಲ್ಲಿವೆ.
ಈ ಹಿಂದೆಯೇ 2014-15ನೇ ಸಾಲಿನಲ್ಲಿ ಲೋಕಸಭೆಯಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ಅರುಣ್ ಜೇಟ್ಲಿ ನದಿ ಜೋಡಣೆ ಕುರಿತು ವಿವರವಾದ ವರದಿ ರೂಪಿಸಲು 100 ಕೋಟಿ ರೂ. ಮಂಜೂರು ಮಾಡಿದ್ದರು. ಬಳಿಕ ಚರ್ಚೆಯಲ್ಲಿ ಮಾಹಿತಿ ನೀಡಿದ ಅಂದಿನ ಜಲಸಂಪನ್ಮೂಲ ಸಚಿವ ಉಮಾ ಭಾರತಿ ರಾಜ್ಯಗಳು ಒಪ್ಪಿದಲ್ಲಿ 10 ವರ್ಷಗಳಲ್ಲಿ ದೇಶದ ಎಲ್ಲಾ ನದಿಗಳನ್ನು ಜೋಡಿಸಲಾಗುತ್ತದೆ ಎಂದು ಹೇಳಿದ್ದರು.