ಬೆಂಗಳೂರು, ಫೆ 01 (DaijiworldNews/KP): ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕೂಲಿ ಕಾರ್ಮಿಕರಿಗಾಗಿ ವಿಶ್ರಾಂತಿ ಕೊಠಡಿಗೆಂದು ಮೀಸಲಿಟ್ಟ ಜಾಗವನ್ನು ಮುಸ್ಲಿಮರ ಪ್ರಾರ್ಥನಾ ಮಂದಿರವನ್ನಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಮಸೀದಿಯನ್ನಾಗಿ ಮಾರ್ಪಡಿಸಿದ್ದಾರೆ ಎಂಬ ಮಲಯಾಳಂ ಭಾಷೆಯಲ್ಲಿ ಹೇಳುತ್ತಿರುವ ವಿಡಿಯೋವೊಂದು ಟ್ವಿಟರ್ನಲ್ಲಿ ವೈರಲ್ ಆಗಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಇನ್ನು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಮತ್ತು ಇತರ ಹಿಂದೂ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ಧಾವಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದು, ನಂತರ ರೈಲ್ವೆ ನಿಲ್ದಾಣದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈಲ್ವೆ ನಿಲ್ದಾಣದೊಳಗೆ ಅಕ್ರಮವಾಗಿ ಮಸೀದಿ ನಿರ್ಮಿಸಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತಂಗುದಾಣ ಎಲ್ಲ ಸಮುದಾಯಗಳಿಗೆ ಸೇರಿದ ಕೂಲಿ ಕಾರ್ಮಿಕರಿಗೆ ಮೀಸಲಾಗಿದ್ದು, ಸುಮಾರು ಹತ್ತು ವರ್ಷಗಳ ಹಿಂದೆಯೇ ಈ ಕೊಠಡಿಯನ್ನು ಮುಸ್ಲಿಮರ ಪ್ರಾರ್ಥನಾ ಮಂದಿರವನ್ನಾಗಿ ಪರಿವರ್ತಿಸಲಾಗಿತ್ತು ಎನ್ನಲಾಗಿದೆ. ಇತರ ಸಮುದಾಯಗಳ ಜನರು ಕೊಠಡಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ ಎಂದರು.
ಇನ್ನು ಕೊಠಡಿಗೂ ಹೆಸರಿಟ್ಟಿರುವ ಮಾಹಿತಿ ಕೂಡ ದೊರಕಿದ್ದು, ಕೂಲಿ ಕಾರ್ಮಿಕರಿಗೆಂದು ಮಾಡಿರೋ ರೂಮ್ ಅನ್ನು ಮುಸ್ಲಿಮರ ಪ್ರಾರ್ಥನಾ ಮಂದಿರವನ್ನಾಗಿ ಮಾಡಿರುವುದು ಎಷ್ಷು ಸರಿ? ಈ ವಿಷಯ ಅಲ್ಲಿನ ಮುಖ್ಯಸ್ಥರಿಗೆ ಮತ್ತು ಅಧಿಕಾರಿಗಳಿಗೆ ತಿಳಿದಿದ್ದರು ಸುಮ್ಮನಿರುವುದು ಯಾಕೆ? ಎಂದು ಹಿಂದು ಜನ ಜಾಗೃತಿ ವೇದಿಕೆ ರಾಜ್ಯ ವಕ್ತಾರ ಮೋಹನ್ ಗೌಡ ಪ್ರಶ್ನಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವವರೆಗೂ ಅಧಿಕಾರಿಗಳಿಗೆ ಈ ವಿಷಯ ತಿಳಿದಿರಲಿಲ್ಲ ಎಂದು ಹಿರಿಯ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ವಿಶ್ರಾಂತಿ ಕೊಠಡಿಯನ್ನು ಮುಸ್ಲಿಮರ ಪ್ರಾರ್ಥನಾ ಮಂದಿರವಾಗಿ ಬದಲಾಯಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.