ಮುಂಬೈ, ಫೆ 01(DaijiworldNews/MS): ಮುಂಬೈನಲ್ಲಿರುವ ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯಕ್ವಾಡ್ ಅವರ ನಿವಾಸದ ಬಳಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರುಖೋ ಜರಾ, ಸಬರ್ ಕರೋ." ಖ್ಯಾತಿಯ ಯೂಟ್ಯೂಬರ್ 'ಹಿಂದೂಸ್ತಾನಿ ಭಾವು' ಅಲಿಯಾಸ್ ವಿಕಾಸ್ ಫಟಕ್ (41) ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸೋಮವಾರ 10 ಮತ್ತು 12 ನೇ ತರಗತಿಗಳ ಆಫ್ ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯಕ್ವಾಡ್ ಅವರ ನಿವಾಸದ ಬಳಿ ಜಮಾಯಿಸುವಂತೆ ಅವರು ವಿದ್ಯಾರ್ಥಿಗಳನ್ನು ಪ್ರಚೋದಿಸಿದ ಕಾರಣದಿಂದ ವಿಕಾಸ್ ವಿರುದ್ಧ ದೂರು ದಾಖಲಾಗಿತ್ತು.
ಕೋವಿಡ್ -19 ದೃಷ್ಟಿಯಿಂದ 10 ಮತ್ತು 12 ನೇ ತರಗತಿಗಳಿಗೆ ಆನ್ಲೈನ್ ಪರೀಕ್ಷೆಗೆ ಒತ್ತಾಯಿಸಿ ನಿನ್ನೆ ಧಾರಾವಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದ ಪ್ರಭಾವಿ ವಿಕಾಸ್ ಪಾಠಕ್ ಅವರನ್ನು ಧಾರಾವಿ ಪೊಲೀಸರು ಬಂಧಿಸಿದ್ದಾರೆ. ಪಾಠಕ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಧಾರಾವಿ ಪೊಲೀಸರು, ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಇಕ್ರಾರ್ ಖಾನ್ ವಖರ್ ಖಾನ್ (25) ಎಂಬಾತನನ್ನೂ ಬಂಧಿಸಿದ್ದಾರೆ. ನೂರಾರು ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳಿಗಾಗಿ ಅಶೋಕ್ ಮಿಲ್ ನಾಕಾದಲ್ಲಿ ಸೋಮವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು. ಸಚಿವರ ನಿವಾಸದ ಬಳಿ ತೆರಳದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಹಿಂದುಸ್ಥಾನಿ ಭಾವು ಮತ್ತಿತರರು ವಿದ್ಯಾರ್ಥಿಗಳು ಸೇರಲು ಕಾರಣರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ಧ ಧಾರಾವಿ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಸಭೆ, ಗಲಭೆ, ಅಪರಾಧಕ್ಕೆ ಕುಮ್ಮಕ್ಕು ನೀಡುವುದು ಮತ್ತು ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯ/ಮಾರಣಾಂತಿಕ ಕೃತ್ಯ ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ