ಕೋಲ್ಕತ್ತಾ, ಫೆ 01(DaijiworldNews/MS): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅಲ್ಲಿನ ರಾಜ್ಯಪಾಲ ಜಗದೀಪ್ ಧನಕರ್ ಅವರ ನಡುವಿನ ಜಗಳ ತಾರಕಕ್ಕೆ ಏರಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಮಮತಾ ಅವರು ರಾಜ್ಯಪಾಲ ಜಗದೀಪ್ ಧಂಖರ್ ಅವರ ಟ್ವಿಟರ್ ಖಾತೆಯನ್ನು "ಬ್ಲಾಕ್" ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ ರಾಜ್ಯಪಾಲರು "ಫೋನ್ ಟ್ಯಾಪಿಂಗ್" ಮತ್ತು ಅಧಿಕಾರಿಗಳಿಗೆ "ಬೆದರಿಕೆ" ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಒಂದು ವರ್ಷದಿಂದ ನಮ್ಮ ತಾಳ್ಮೆಯೂ ಕಡಿಮೆಯಾಗುತ್ತಿದೆ, ರಾಜ್ಯಪಾಲರು ಹಲವಾರು ಕಡತಗಳನ್ನು ತೆರವುಗೊಳಿಸಿಲ್ಲ, ಅವರು ಪ್ರತಿ ಕಡತವನ್ನು ಪೆಂಡಿಂಗ್ ಇಡುತ್ತಿದ್ದಾರೆ,ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ನಾಲ್ಕು ಪತ್ರಗಳನ್ನು ಬರೆದಿದ್ದೇನೆ ಎಂದು ಅವರು ಹೇಳಿದ್ದಾರೆ
ಅವರು ದಿನ ನಿತ್ಯ ಟ್ವಿಟರ್ನಲ್ಲಿ ನಮ್ಮನ್ನು ಬೈಯುವುದೇ ಕಾಯಕವಾಗಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಬ್ಲಾಕ್ ಮಾಡಿದ್ದೇನೆ.ಚುನಾವಣೆಯಲ್ಲಿ ಬಹುಮತ ಪಡೆದು, ಸಂವಿಧಾನಬದ್ಧವಾಗಿ ರಚನೆಯಾದ ಸರ್ಕಾರಕ್ಕೆ ರಾಜ್ಯಪಾಲರು ಅಡ್ಡಿಯುಂಟು ಮಾಡುತ್ತಿದ್ದು ಇದು ನಾಚಿಕೆಗೇಡಿನ ವಿಷಯ' ಎಂದು ಹರಿಹಾಯ್ದಿದ್ದಾರೆ.
ಸೋಮವಾರವಷ್ಟೇ ಟಿಎಂಸಿ ಸಂಸದರು ಜಗದೀಪ್ ಧನಕರ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಹುದ್ದೆಯಿಂದ ವಜಾ ಮಾಡಬೇಕು ಎಂದು ಸಂಸತ್ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಆಗ್ರಹಿಸಿದ್ದರು.