ನವದೆಹಲಿ, ಫೆ 01(DaijiworldNews/MS): ಸಾಂಕ್ರಮಿಕ ಕಾಲಘಟ್ಟದಿಂದ 2 ವರ್ಷ ನಲುಗಿದ್ದ ಭಾರತದ ಆರ್ಥಿಕತೆಗೆ ಮತ್ತೆ ಬಲ ತುಂಬುವ ಬಹು ನಿರೀಕ್ಷೆಯ ಕೇಂದ್ರ ಬಜೆಟ್ ಇಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಇಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ.
ನಿರ್ಮಲಾ ಸೀತಾರಾಮನ್ ಇಂದು 4ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಈ ವರ್ಷವೂ ಕಾಗದ ರಹಿತ ಮಾದರಿಯಲ್ಲಿ ಬಜೆಟ್ ಮಂಡನೆಯಾಗಲಿದೆ. ಕಳೆದ ವಾರಿಯೂ ಸೀತಾರಾಮನ್ ಅವರ ಬಜೆಟ್ ಭಾಷಣವು ಭಾರತದ ಸಂಸತ್ತಿನ ಇತಿಹಾಸದಲ್ಲಿಯೇ ಸುದೀರ್ಘವಾಗಿತ್ತು. ಅವರ ಪ್ರಸ್ತುತಿಯ ಅವಧಿ 2 ಗಂಟೆ 40 ನಿಮಿಷಗಳಿಂದ ಕೂಡಿತ್ತು.
ಇನ್ನು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ತೀವ್ರ ಕುತೂಹಲ ಮೂಡಿಸಿರುವ ಚುನಾವಣೆಯ ಮತದಾನಕ್ಕೆ ಕೇವಲ 9 ದಿನಗಳು ಬಾಕಿಯಿದ್ದು, ಹೀಗಾಗಿ ಕೇಂದ್ರ ಬಜೆಟ್ನಲ್ಲಿ ಜನಪ್ರಿಯ ಕೊಡುಗೆ ಪ್ರಕಟವಾಗಬಹುದು ಎಂಬ ಲೆಕ್ಕಚಾರ ಹಾಕಲಾಗಿದೆ. ರೈಲ್ವೆ ಬಜೆಟ್ ಕೂಡ ಜತೆಗೇ ಘೋಷಣೆ ಮಾಡುವ ಸಾಧ್ಯತೆ ಇದೆ.