ಬೆಂಗಳೂರು, ಜ.31 (DaijiworldNews/KP): ಸಾರ್ವಜನಿಕರು ಹಾಗೂ ಸವಾರರಿಗೆ ಟೋಯಿಂಗ್ ವ್ಯವಸ್ಥೆಯಿಂದ ತೊಂದರೆಯಾಗದಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಟೋಯಿಂಗ್ ವ್ಯವಸ್ಥೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಸಾರ್ವಜನಿಕರು ಹಾಗೂ ಸವಾರರಿಗೆ ತೊಂದರೆಯಾಗದಂತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು. ಈ ವಿಷಯದ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದರು.
ಈಗಿರುವ ಟೋಯಿಂಗ್ ವ್ಯವಸ್ಥೆಯಲ್ಲಿ ಯಾವೆಲ್ಲ ಬದಲಾವಣೆ ಮಾಡಬೇಕು, ಈ ವ್ಯವಸ್ಥೆಯನ್ನು ಬೇರೆ ಏಜೆನ್ಸಿಯವರಿಗೆ ನೀಡಬೇಕಾ ಅಥವಾ ಮುಂದುವರೆಸಬೇಕಾ, ನಿಯಮಗಳನ್ನು ಉಲ್ಲಂಘಿಸಿದಾಗ ಸಾರ್ವಜನಿಕರು ಹಾಗೂ ವಾಹನ ಸವಾರರ ಜೊತೆ ಹೇಗೆ ವರ್ತಿಸಬೇಕು, ದಂಡದ ಪ್ರಮಾಣ ಎಂಬುದರ ಬಗ್ಗೆಯೂ ಚರ್ಚೆಯಾಗಲಿದ್ದು, ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಅದು ಸಾರ್ವಜನಿಕರ ಹಿತದೃಷ್ಟಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಎರಡು ದಿನಗಳ ಹಿಂದೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ದ್ವಿಚಕ್ರ ವಾಹನ ಸಂಚಾರಿ ವಿಭಾಗದ ಪೊಲೀಸರು ಟೋಯಿಂಗ್ ಮಾಡಿದ್ದರು. ಆದರೆ ತಮ್ಮ ವಾಹನವನ್ನು ಬಿಡುವಂತೆ ಸವಾರ ಅಂಗಲಾಚಿಕೊಂಡಿದ್ದ. ಅಲ್ಲದೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ವಾಹನದ ಹಿಂದಿನಿಂದ ಓಡು ಓಡುತ್ತಲೇ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ಸಂಚಾರಿ ಪೊಲೀಸರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸರ್ಕಾರ ಟೋಯಿಂಗ್ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ ಎಂದರು.