ನವದೆಹಲಿ, ಜ.31 (DaijiworldNews/KP): ಅನೇಕ ಭಾರತೀಯರು ಮಹಿಳೆಯರನ್ನು ಮನುಷ್ಯರು ಎಂಬ ಭಾವನೆಯಲ್ಲಿ ಪರಿಗಣಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕಳೆದ ವಾರ, ಪೂರ್ವ ದೆಹಲಿಯ ಕಸ್ತೂರ್ಬಾ ನಗರದಲ್ಲಿ ಕೆಲವು ದುಷ್ಟರು ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಮೆರವಣಿಗೆ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಈ ವಿಷಯದ ಕುರಿತು ಟ್ವೀಟ್ ಮಾಡಿದ ಅವರು, 20 ವರ್ಷದ ಮಹಿಳೆಯನ್ನು ಅಮಾನುಷವಾಗಿ ಥಳಿಸಿ ಮೆರವಣಿಗೆ ಮಾಡಿರುವ ವಿಡಿಯೋವೊಂದು ಸಮಾಜದಲ್ಲಿರುವ ನಿಕೃಷ್ಟ ಪ್ರವೃತ್ತಿಯನ್ನು ಬಹಿರಂಗಪಡಿಸುತ್ತದೆ. ಇನ್ನೊಂದು ಕಹಿ ಸತ್ಯವೆಂದರೆ ಅನೇಕ ಭಾರತೀಯರು ಮಹಿಳೆಯರನ್ನು ಮನುಷ್ಯ ಎಂಬ ದೃಷ್ಟಿಯಲ್ಲಿಯು ಪರಿಗಣಿಸುವುದಿಲ್ಲ. ಈ ನಾಚಿಕೆಗೇಡಿನ ಸಂಗತಿಯನ್ನು ನಾವೆಲ್ಲರೂ ಒಪ್ಪಲೇ ಬೇಕು ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಸದ್ಯ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವಮಾನ ಮಾಡಿದ ಎಂಟು ಮಹಿಳೆಯರು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸದಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ, ಕೆಲವರು ಈ ಘಟನೆಗೆ ಕೋಮುವಾದದ ಬಣ್ಣ ಬಳಿಯುತ್ತಿದ್ದಾರೆ ಹಾಗೂ ಇನ್ನೂ ಕೆಲವರು ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವದಂತಿಗಳನ್ನು ಹರಡುತ್ತಿದೆ. ಇದು ತಪ್ಪು ಮತ್ತು ಸುಳ್ಳು ಮಾಹಿತಿ ಸಂತ್ರಸ್ತೆ ಸುರಕ್ಷಿತವಾಗಿದ್ದಾರೆ ಎಂದು ಶಹದಾರದ ಉಪ ಪೊಲೀಸ್ ಆಯುಕ್ತ ಆರ್ ಸತ್ಯಸುಂದರಂ ತಿಳಿಸಿದ್ದಾರೆ.