ನವದೆಹಲಿ, 31(DaijiworldNews/MS): ಲೈಮ್ಲೈಟ್ ಒಟಿಟಿಯಲ್ಲಿ ʼನಾನೇಕೆ ಗಾಂಧಿ ಕೊಂದೆʼ (ವೈ ಐ ಕಿಲ್ಡ್ ಗಾಂಧಿ) ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಿನಿಮಾ ಬಿಡುಗಡೆಯಿಂದ ಸಂವಿಧಾನದ 32ನೇ ವಿಧಿಯಡಿ ಅರ್ಜಿದಾರರ ಮೂಲಭೂತ ಹಕ್ಕಿಗೆ ಚ್ಯುತಿಯಾಗಿಲ್ಲ. ಹೀಗಾಗಿ, ಈ ವಿಧಿಯಡಿ ಸಲ್ಲಿಸಲಾಗಿರುವ ಮನವಿಯನ್ನು ಪರಿಗಣಿಸಲಾಗದು ಎಂದು ನ್ಯಾ. ಇಂದಿರಾ ಬ್ಯಾನರ್ಜಿ ನೇತೃತ್ವದ ಪೀಠವು ಹೇಳಿದ್ದು, ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿದೆ.
ವಕೀಲ ಅನುಜ್ ಭಂಡಾರಿ ಅವರ ಮೂಲಕ ಸಿಕಂದರ್ ಬೆಹ್ಲ್ ಎಂಬುವವರು ಅರ್ಜಿ ಸಲ್ಲಿಸಿದ್ದು, ಒಟಿಟಿ ವೇದಿಕೆಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಯಾವುದೇ ರೀತಿಯ ಪ್ರದರ್ಶನ, ಪ್ರಕಟಣೆ ಮಾಡದಂತೆಯೂ, ಚಿತ್ರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನಿಷೇಧಿಸುವಂತೆಯೂ ಕೋರಲಾಗಿತ್ತು. ಈ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನವನ್ನು ತಡೆಯದಿದ್ದರೆ, ಅದು ರಾಷ್ಟ್ರಪಿತನ ಪ್ರತಿಷ್ಠೆಗೆ ಭಾರಿ ದಕ್ಕೆಯುಂಟು ಮಾಡಲಿದೆ. ಚಿತ್ರವು ಕೋಮು ಸೌಹಾರ್ದತೆ, ದ್ವೇಷ ಹರಡುವುದು ಮತ್ತು ಶಾಂತಿ ಕದಡುವ ಗುರಿಯನ್ನು ಹೊಂದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಿಷ್ಟೇ ಅಲ್ಲದೇ, ಒಟಿಟಿ ಪ್ಲಾಟ್ಫಾರ್ಮ್ಗಳ ನಿಯಂತ್ರಣದ ಅಗತ್ಯವನ್ನೂ ಅರ್ಜಿಯಲ್ಲಿ ಒತ್ತಿಹೇಳಲಾಗಿತ್ತು.
ಸೆನ್ಸಾರ್ ಮಂಡಳಿಯು ಚಿತ್ರವನ್ನು ತೆರವುಗೊಳಿಸಿಲ್ಲ ಮತ್ತು ಅದರ ಪರಿಣಾಮವಾಗಿ ಜನವರಿ 30 ರಂದು OTT ಪ್ಲಾಟ್ಫಾರ್ಮ್ 'ಲೈಮ್ಲೈಟ್' ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅದು ಸೂಚಿಸಿದೆ.
ಈ ಚಲನಚಿತ್ರವನ್ನು 2017 ರಲ್ಲಿ ನಿರ್ಮಿಸಲಾಯಿತು ಮತ್ತು ಇದುವರೆಗೆ ಯಾವುದೇ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿಲ್ಲ. ಕುತೂಹಲಕಾರಿ ವಿಚಾರವೆಂದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಮತ್ತು ಸಂಸದ (ಎಂಪಿ) ಅಮೋಲ್ ಕೋಲ್ಹೆ ಚಿತ್ರದಲ್ಲಿ ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.