ಬೆಂಗಳೂರು, ಜ 31(DaijiworldNews/MS): ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಅವರನ್ನು ನೇಮಕ ಮಾಡಿರುವ ಹಿನ್ನಲೆಯಲ್ಲಿ ವ್ಯಂಗ್ಯವಾಡಿರುವ ಬಿಜೆಪಿ " ರೌಡಿ ಹಿನ್ನೆಲೆಯ ವ್ಯಕ್ತಿಗಳಿಗೆ ಕಾಂಗ್ರೆಸ್ ಹೆಬ್ಬಾಗಿಲು ತೆರೆಯಬೇಕೆಂದು ಡಿಕೆಶಿ ಪ್ರತಿಪಾದಿಸುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, " ಯುವ ಕಾಂಗ್ರೆಸ್ ನಾಯಕತ್ವಕ್ಕಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಣದ ಮಧ್ಯೆ ಮತ್ತೆ ಕಲಹ ಆರಂಭವಾಗಿದೆ.ಇದು ನಿಮ್ಮ ಪಕ್ಷದ ಆಂತರಿಕ ವಿಚಾರ ಆಗಿರಬಹುದು. ಆದರೆ ಬಹಿರಂಗವಾಗಿ ಬಡಿದಾಡಬೇಡಿ. ಯುವ ಕಾಂಗ್ರೆಸ್ ನಾಯಕತ್ವ ತನ್ನಂತವರಿಗೆ ನೀಡಬೇಕು ಎಂಬುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಹಠ. ಅದಕ್ಕಾಗಿ ನಲಪಾಡ್ ಪರವಾಗಿ ಲಾಬಿ ನಡೆಸುತ್ತಿದ್ದಾರೆ. ಅಂದರೆ ರೌಡಿ ಹಿನ್ನೆಲೆಯ ವ್ಯಕ್ತಿಗಳಿಗೆ ಕಾಂಗ್ರೆಸ್ ಹೆಬ್ಬಾಗಿಲು ತೆರೆಯಬೇಕೆಂದು ಡಿಕೆಶಿ ಪ್ರತಿಪಾದಿಸುತ್ತಿದ್ದಾರೆಯೇ?" ಎಂದು ಕುಟುಕಿದೆ.
ಮತ್ತೊಂದು ಟ್ವೀಟ್ ನಲ್ಲಿ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡುವುದು ನಮ್ಮ ಗುರಿ ಎಂದ ನಲಪಾಡ್ ಹೇಳಿಕೆಗೆ ಕುಹಕವಾಡಿರುವ ಬಿಜೆಪಿ , " ಅತ್ತು ಕರೆದು ಔತಣ ಮಾಡಿಸಿಕೊಂಡು ಎಂಥ ಮಾತಾಡಿಬಿಟ್ಟಿರಿ ಮಿಸ್ಟರ್ ನಲಪಾಡ್ , ಮೊದಲು ಡಿಕೆಶಿ ಅವರನ್ನು ಸಿಎಂ ಮಾಡೋಕೆ ಸಿದ್ದರಾಮಯ್ಯ ಅವರು ಬಿಡುತ್ತಾರೆಯೇ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಿ.ಆಮೇಲೆ ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಿ" ಎಂದು ಸಲಹೆ ನೀಡಿದೆ.
"ಅಧಿಕಾರ ಸ್ವೀಕಾರ ಮಾಡಿದ ದಿನವಾದರೂ ಸ್ವಲ್ಪ ಒಳ್ಳೆಯ ಯೋಚನೆ ಮಾಡಿ. ನೀವು ಪ್ರಸ್ತಾಪ ಮಾಡಿದ ವಿಚಾರ ಕೈ ಗೂಡುವುದಿಲ್ಲ ಎಂದು ಅರ್ಥವಾಗಿ ಎಂತೆಂತವರೋ ಮೂಲೆಗುಂಪಾಗಿದ್ದಾರೆ. ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸುವುದು ಮರಳುಗಾಡಿನಲ್ಲಿ ಮರಿಚೀಕೆಯನ್ನು ಹಿಡಿದಂತೆ, ಎಂದಿಗೂ ಕೈಗೂಡದು "ಎಂದು ಹೇಳಿದೆ.