ಬೆಂಗಳೂರು, ಜ.31 (DaijiworldNews/KP): ಕಲ್ಲು ಎಸೆದ ವಿಕಲಚೇತನ ಮಹಿಳೆಯನ್ನು ಸಾರ್ವಜನಿಕರ ಕಣ್ಣೆದುರೆ ಬೂಟು ಕಾಲಿನಲ್ಲಿ ಒದ್ದ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.
ಹಲಸೂರು ಗೇಟ್ ಸಂಚಾರ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ನಾರಾಯಣ್ ಅಮಾನತುಗೊಂಡ ಪೊಲೀಸ್. ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಅರಗ ಜ್ಙಾನೇಂದ್ರ ಆದೇಶ ಮಾಡಿದ್ದರು. ರವಿಕಾಂತೇಗೌಡ ನೇತೃತ್ವದಲ್ಲಿ ತನಿಖೆ ನಡೆಸಿ ಹಲ್ಲೆ ನಡೆಸಿದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.
ಇನ್ನು ಮಹಿಳೆಗೆ ಟೋಯಿಂಗ್ನವರನ್ನು ಕಂಡರೆ ಸಾಕು ಕಲ್ಲಿನಿಂದ ಹಲ್ಲೆ ಮಾಡುತ್ತಿದ್ದರು, ಇದೇ ಕಾರಣಕ್ಕೆ ಕೋಪಗೊಂಡ ಪೊಲೀಸ್ ಪೇದೆ ಆಕೆಗೆ ಥಳಿಸಿದ್ದು, ಈ ಕುರಿತು ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅಡ್ಡಿಪಡಿಸಿದ ಮಹಿಳೆಯ ವಿರುದ್ದ ಪ್ರಥಮ ಮಾಹಿತಿ ವರದಿಯನ್ನು ಸಹ ದಾಖಲಿಸಿಕೊಂಡಿದ್ದಾರೆ.
ಟೋಯಿಂಗ್ ನಿಯಮಾನುಸಾರ ವಾಹನಗಳನ್ನು ಎಳೆಯುವ ಮುನ್ನ ಧ್ವನಿವರ್ಧಕಗಳ ಮೂಲಕ ಪೊಲೀಸರು ಘೋಷಣೆ ಮಾಡಬೇಕು ಆದರೆ ಇಲ್ಲಿ ಘೋಷಣೆ ಮಾಡದೆ ವಾಹನ ನಿಲುಗಡೆಗೆ ಅವಕಾಶ ಇಲ್ಲದ ಸ್ಥಳಗಳಲ್ಲಿ ಇರಿಸಲಾಗಿದ್ದ ವಾಹನಗಳನ್ನೂ ಎಳೆದು ತರಲಾಗುತ್ತಿದೆ, ಅಲ್ಲದೆ ಖಾಸಗಿ ಸಿಬ್ಬಂದಿಗಳು ದಂಡದ ಮೊತ್ತ ಹೆಚ್ಚಿಸಲು ಮನಸೋಇಚ್ಛೆ ವಾಹನಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ದೂರು ಕೇಳಿ ಬಂದಿವೆ.
ಇನ್ನು ಜೀವನ್ ಭೀಮಾ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನವನ್ನು ಎಳೆದುಕೊಂಡು ಹೋಗುವಾಗ ರಸ್ತೆಯಲ್ಲಿ ಪಾರ್ಸೆಲ್ಗಳು ಬಿದ್ದಿರುವುದು ಕೂಡ ಕ್ಯಾರೇ ಎನ್ನದ ಟೋಯಿಂಗ್ ವಾಹನವನ್ನು ಪೊಲೀಸರು ಅಮಾನತುಗೊಳಿಸಿದ್ದಾರೆ. ಅಲ್ಲದೆ ಬಾಣಸವಾಡಿಯಲ್ಲಿ ಟೋಯಿಂಗ್ ವಾಹನ ಚಾಲಕನಿಗೆ ಸಾರ್ವಜನಿಕರೇ ಅಟ್ಟಾಡಿಸಿ ಥಳಿಸಿದ್ದರು, ಇತ್ತೀಚೆಗೆ ಡೆಲಿವರಿ ಬಾಯ್ ತನ್ನ ವಾಹನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಟೋಯಿಂಗ್ ಸಿಬ್ಬಂದಿಯ ಹಿಂದೆ ಓಡುತ್ತಿರುವ ಘಟನೆಯ ಕುರಿತು ಈಗಾಗಲೆ ತನಿಖೆಗೆ ಆದೇಶಿಸಲಾಗಿದೆ,
ಟೋಯಿಂಗ್ ವ್ಯವಸ್ಥೆಯನ್ನು ಜನಸ್ನೇಹಿ ವ್ಯವಸ್ಥೆಯಾಗಿ ಜಾರಿಗೆ ತರವ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ, ಪೊಲೀಸ್ ಆಯುಕ್ತರು, ಪೊಲೀಸ್ ಮಹಾನಿರ್ದೇಶಕರು ಮತ್ತು ಸಂಚಾರ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ಸಭೆ ಕರೆದಿದ್ದಾರೆ. ಇನ್ನು ದಕ್ಷ. ಟೋಯಿಂಗ್ ವ್ಯವಸ್ಥೆಯನ್ನು ಖಾಸಗಿ ಆಪರೇಟರ್ಗಳಿಗೆ ವಹಿಸಿದ ನಂತರ ಜನರ ಮೇಲಿನ ದೌರ್ಜನ್ಯದ ಬಗ್ಗೆ ಪರಿಶೀಲಿಸಬೇಕು ಎಂದು ಸಿಎಂ ಹೇಳಿದ್ದು, ಈ ನಿಟ್ಟಿನಲ್ಲಿ ಜನರೊಂದಿಗೆ ಅಸಭ್ಯವಾಗಿ ವರ್ತಿಸದಂತೆ ಟೋಯಿಂಗ್ ವ್ಯವಸ್ಥೆಯಲ್ಲಿ ತೊಡಗಿರುವ ಪೊಲೀಸರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಈಗಾಗಲೇ ಸೂಚನೆ ನೀಡಿದ್ದಾರೆ.