ಕಾನ್ಪುರ, ಜ 31(DaijiworldNews/MS): ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ಸೋಮವಾರ ಮುಂಜಾನೆ ಎಲೆಕ್ಟ್ರಿಕ್ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಚಲಿಸಿ, ಅಕ್ಕಪಕ್ಕದಲ್ಲಿ ನೋಡುತ್ತಾ ನಿಂತಿದ್ದವರಿಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ.
ಘಂಟಾಘರ್ ಮತ್ತು ಟಾಟ್ಮಿಲ್ ಚೌರಾಹಾ ನಡುವೆ ನಡೆದ ಈ ದುರಂತ ಸಂಭವಿಸಿದೆ. ಈ ಅಪಘಾತ ನಡೆದ ಸಂದರ್ಭದಲ್ಲಿ 15 ಮಂದಿಯ ಗುಂಪು ಇತ್ತು ಎಂದು ಪೊಲೀಸರು ಹೇಳಿದ್ದಾರೆ.
ಮೂವರು ಸಂತ್ರಸ್ತರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇತರರ ಪತ್ತೆಯನ್ನು ಗುರುತು ಹಚ್ಚಲು ಪ್ರಯತ್ನ ನಡೆದಿದೆ ಎಂದು ಕಾನ್ಪುರ ಪೂರ್ವ ಡಿಸಿಪಿ ಪ್ರಮೋದ್ ಕುಮಾರ್ ಹೇಳಿದ್ದಾರೆ. ಟಾಟ್ಮಿಲ್ ಕ್ರಾಸ್ ಬಳಿ ಬಸ್ಸಿನ ಬ್ರೇಕ್ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ. ಪರಿಣಾಮವಾಗಿ ಕಾರು, ಮೋಟರ್ಸೈಕಲ್ಗಳು ಮತ್ತು ಪಾದಚಾರಿಗಳಿಗೆ ಬಸ್ ಡಿಕ್ಕಿ ಹೊಡೆಯಿತು ಎಂದು ವಿವರಿಸಿದ್ದಾರೆ.
ಅಪಘಾತದಲ್ಲಿ ಮೂರು ಕಾರುಗಳು ಮತ್ತು ಹಲವಾರು ಬೈಕ್ಗಳು ಜಖಂಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.