ಶೃಂಗೇರಿ, ಜ 31(DaijiworldNews/MS): ಶೃಂಗೇರಿ ತಾಲೂಕಿನ ಅಮಾನತುಗೊಂಡ ತಹಶೀಲ್ದಾರ್ ಅವರ ವಾಹನ ಚಾಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೃಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹಕ್ಕು ಪತ್ರಗಳಿಗೆ ಸಂಬಂಧಿಸಿದ ಹಗರಣ ಹಾಗೂ ವಿವಾದಗಳ ಪ್ರಕರಣದಲ್ಲಿ ಸಿಲುಕಿದ್ದ ತಹಶೀಲ್ದಾರ್ ಅವರನ್ನು ಇತ್ತೀಚೆಗೆ ಅಮಾನತುಗೊಳಿಸಲಾಗಿತ್ತು.
ಗ್ರಾಮ ಲೆಕ್ಕಿಗ ಸಿದ್ದಪ್ಪ ಎಂಬಾತ ಫಲಾನುಭವಿಯೋರ್ವರಿಗೆ ಹಕ್ಕು ಪತ್ರ ನೀಡುವುದಕ್ಕಾಗಿ 60,000 ರೂಪಾಯಿ ಲಂಚ ಪಡೆದ ಹಿನ್ನೆಲೆಯಲ್ಲಿಎಸಿಬಿಯಿಂದ ಬಂಧನಕ್ಕೊಳಗಾಗಿದ್ದರು. ಮೊದಲು ಇದು ಕೇವಲ ಲಂಚ ಪ್ರಕರಣ ಎಂದು ಭಾವಿಸಲಾದರೂ ತನಿಖೆ ಬಳಿಕ ತಹಶೀಲ್ದಾರ್ ಅಂಬುಜಾ ಹಾಗೂ ಇತರ ಹಿರಿಯ ಅಧಿಕಾರಿಗಳು ಹಗರಣವೊಂದರಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಂಬುಜಾ ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದರು. ಈ ಬಳಿಕ ಸಿದ್ದಪ್ಪ ಹಾಗೂ ಅಂಬುಜಾ ಇಬ್ಬರೂ ಜಾಮೀನು ಪಡೆದು ಹೊರಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಇಬ್ಬರನ್ನು ಅಮಾನತುಗೊಳಿಸಿತ್ತು.
ಈ ನಡುವೆ ತಹಶೀಲ್ದಾರ್ ಅವರ ಬಳಿ ಕಾರು ಚಾಲಕನ ಕೆಲಸ ಮಾಡುತ್ತಿದ್ದ ಹೆಗ್ತೂರು ವಿಜೇತ್ (26) ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಧಿಕಾರಿಗಳು ಮತ್ತು ದಲ್ಲಾಳಿಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ ಎಂದು ಚಾಲಕ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಒಟ್ಟಾರೆ ಚಾಲಕ ಆತ್ಮಹತ್ಯೆ ಪ್ರಕರಣ ಮತ್ತಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.