ಲಖನೌ, ಜ.30 (DaijiworldNews/KP): ಮುಂಬರುವ ಚುನಾವಣೆಯಲ್ಲಿ ’ಲಾಲ್ ಟೋಪಿ’ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, ಬಿಜೆಪಿಯು ಕ್ರಿಮಿನಲ್ ಇಮೇಜ್ ಹೊಂದಿರುವ 99 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಅಲ್ಲದೇ ರೈತರು ಬಿಜೆಪಿಯನ್ನು ಅಧಿಕಾರದಿಂದ ಬೀಳಿಸಲು ಮತ್ತು ಯುಪಿಯಿಂದ ಬಿಜೆಪಿಯನ್ನು ಓಡಿಸಲು ಸಿದ್ಧರಾಗಿದ್ದಾರೆ ಎಂದು ಯೋಗಿ ಆದತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದ ಮೊದಲ ಹಂತದ ವಿಧಾನಸಭಾ ಚುನಾವಣೆಯು ಫೆಬ್ರವರಿ 10ರಂದು ನಡೆಯಲಿದೆ, ಈ ನಿಟ್ಟಿನಲ್ಲಿ ಮತದಾರರ ಮನ ಒಲಿಸಲು ರಾಜಕಾರಣಿಗಳು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಗೋರಖ್ಪುರದಲ್ಲಿ ನಡೆದ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಕೊಂಡು ’ಲಾಲ್ ಟೋಪಿ’ ಉತ್ತರ ಪ್ರದೇಶಕ್ಕೆ ರೆಡ್ ಅಲರ್ಟ್ ಎಂದಿದ್ದರು. ಈ ಹೇಳಿಕೆಯು ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷಕ್ಕೆ ಹರಿಹಾಯಲು ಮತ್ತೊಂದು ಕಾರಣವಾಗಿದೆ.
ಇನ್ನು ಕುಸ್ತಿಪಟು ಪಂದ್ಯದಲ್ಲಿ ಸೋಲಲು ಆರಂಭಿಸಿದಾಗ ಆತ ಕೈ-ಕಾಲುಗಳನ್ನು ಬಗ್ಗಿಸುತ್ತಾನೆ, ಕೆಲವೊಮ್ಮೆ ಕಚ್ಚುತ್ತಾನೆ, ಪರಚುತ್ತಾನೆ ಅಥವಾ ಹಿಸುಕುತ್ತಾನೆ. ಅದನ್ನೇ ಈಗ ಬಿಜೆಪಿ ಕೂಡ ಮಾಡುತ್ತಿದೆ. ಸಮಾಜವಾದಿ ಪಕ್ಷವು ಐತಿಹಾಸಿಕ ಗೆಲುವುನತ್ತ ಸಾಗುತ್ತಿದೆ ಎಂದರು.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ನಡೆಯಲಿದ್ದು, ಎರಡನೇ ಹಂತ ಫೆಬ್ರವರಿ 14ರಂದು, ಮೂರನೇ ಹಂತ ಫೆಬ್ರವರಿ 20, ನಾಲ್ಕನೇ ಹಂತ ಫೆಬ್ರವರಿ 23ರಂದು, ಫೆಬ್ರವರಿ 27ರಂದು ಐದನೇ ಹಂತ ಹಾಗೂ ಮಾರ್ಚ್ 3 ರಂದು 7 ಆರನೇ ಹಂತ ಮತ್ತು ಮಾರ್ಚ್ 7 ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ.