ಯಾದಗಿರಿ,ಜ.30 (DaijiworldNews/KP): 7ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ತಾಯಿ ತನ್ನ ಇಬ್ಬರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಪಕ್ಕದ ಗ್ರಾಮಕ್ಕೆ ಹತ್ತಿ ಬಿಡಿಸುವ ಕೆಲಸಕ್ಕೆ ಹೋಗುತ್ತಿದ್ದರು, ಎಂದಿನಂತೆ ಜನವರಿ 27ರಂದು ಮಕ್ಕಳನ್ನು ಬಿಟ್ಟು ಆಕೆ ಕೆಲಸಕ್ಕೆ ತೆರಳುವುದನ್ನು ಗಮನಿಸಿದ 68ವರ್ಷದ ವೃದ್ಧ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ, ಅಲ್ಲದೆ ಆಕೆಯ ತಮ್ಮನಿಗೆ ಕತ್ತು ಹಿಸುಕಿ ಕೊಲೆ ಮಾಡುವುದಾಗಿ ಬೆದರಿಗೆ ಕೂಡ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಮಕ್ಕಳಿಬ್ಬರ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ವೃದ್ಧನಿಗೆ ಬೈದು ಬುದ್ದಿವಾದ ಹೇಳಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಜನವರಿ 29ರಂದು ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.