ಬೆಂಗಳೂರು, ಜ.30 (DaijiworldNews/KP): ನೆರೆಯ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಕನ್ನಡಿಗರ ಹಿತದೃಷ್ಟಿಯಿಂದ ಕನ್ನಡ ಪರ ನೀತಿಯನ್ನು ಜಾರಿಗೆ ತರಲು ಮುಂದಾಗಿರುವ ಕೇರಳ ಸರ್ಕಾರದ ಚಿಂತನೆಗೆ ಕರ್ನಾಟಕ ಸರ್ಕಾರ ಮತ್ತು ನಾಡಿನ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಅಭಿನಂದನೆ ಸಲ್ಲಿಸಿ, ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿರುವ ಕನ್ನಡಿಗರ ಅನುಕೂಲಕ್ಕಾಗಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಕೇರಳ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕನ್ನಡ ಪ್ರಾಧಿಕಾರವು ಕೇರಳ ಸರ್ಕಾರಕ್ಕೆ ಪತ್ರ ಬರೆದು ಕನ್ನಡಿಗರ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಭದ್ರತೆಯ ಭಾವನೆಯನ್ನು ಒದಗಿಸುವಂತೆ ಮನವಿ ಮಾಡಿತ್ತು. ಈ ಪತ್ರಕ್ಕೆ ಪ್ರತಿಯಾಗಿ ಕೇರಳ ಸರ್ಕಾರವು ಕರ್ನಾಟಕಕ್ಕೆ ಈ ವಿಷಯದ ಕುರಿತು ಈಗಾಗಲೇ ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದೆ ಎಂದು ತಿಳಿಸಿದೆ.
ಕಾಸರಗೋಡು ಜಿಲ್ಲೆಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುತ್ತುವರಿದಿದ್ದು ಮತ್ತು ಕಾಸರಗೋಡಿನ ಜನರು ಪ್ರತಿದಿನ ಶಿಕ್ಷಣ, ವ್ಯಾಪಾರ ಉದ್ದೇಶಗಳಿಗಾಗಿ ಹತ್ತಿರದ ಕರಾವಳಿ ಪಟ್ಟಣವಾದ ಮಂಗಳೂರಿನೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ, ಅಲ್ಲದೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಶಾಸಕ ಎಕೆಎಂ ಅಶ್ರಫ್ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಹಿಂದಿನ ಮಾಜಿ ಶಾಸಕ ಅಬ್ದುಲ್ ರಜಾಕ್ ಕೂಡ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು ಎಂದು ತಿಳಿಸಿದೆ.
ಇತ್ತೀಚೆಗೆ, ಕೇರಳ ಸರ್ಕಾರವು ಕನ್ನಡದಿಂದ ಪಡೆದ ಗ್ರಾಮಗಳ ಹೆಸರನ್ನು ಮಲಯಾಳಂಗೆ ಬದಲಾಯಿಸುವ ಯೋಜನೆಗಳ ಬಗ್ಗೆ ವದಂತಿಗಳು ಹರಡಿದಾಡಿತ್ತು, ಈ ನಿಟ್ಟಿನಲ್ಲಿ ಆಗಿನ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗ್ರಾಮಗಳ ಹೆಸರನ್ನು ಬದಲಾಯಿಸದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು, ಇದಕ್ಕೆ ಪ್ರತಿಯಾಗಿ ಅವರು ಕೇರಳ ಸರ್ಕಾರವು ಅಂತಹ ಯಾವುದೇ ಪ್ರಯತ್ನಗಳನ್ನು ಮಾಡುವುದಿಲ್ಲ ಎಂಬ ಭರವಸೆ ನೀಡಿ ಪತ್ರ ಬರೆದಿದ್ದರು.