ಚಿಕ್ಕಮಗಳೂರು, ಜ.30 (DaijiworldNews/KP): ಚಿಕ್ಕಮಗಳೂರು ಜಿಲ್ಲೆಯ ಜಡಗನಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕನೊಬ್ಬ ತನ್ನ ಅಪ್ರಾಪ್ತ ಪ್ರೇಮಿಯನ್ನು ಕೊಂದು ರಾತ್ರಿಯಿಡೀ ಆಕೆಯ ಪಾರ್ಥಿವ ಶರೀರದೊಂದಿಗೆ ಕಾಡಿನಲ್ಲಿಯೇ ಕಳೆದಿರುವ ಆಘಾತಕಾರಿ ಘಟನೆಯೊಂದು ಶನಿವಾರ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಅಪ್ರಾಪ್ತರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು, ಇವರಿಬ್ಬರ ಪ್ರೀತಿಯ ವಿಷಯವು ಕುಟುಂಬ ಸದಸ್ಯರಿಗೆ ತಿಳಿದಿತ್ತು ಮತ್ತು ಅವರ ಮದುವೆಯನ್ನು ಕಾನೂನುಬದ್ದ ವಯಸ್ಸನ್ನು ತಲುಪಿದ ಬಳಿಕ ಮಾಡಿಸುವುದಾಗಿ ಭರವಸೆ ಕೂಡ ನೀಡಿದ್ದರು ಎಂದು ತಿಳಿದು ಬಂದಿದೆ.
ಜನವರಿ 28 ರ ರಾತ್ರಿ ಹುಡುಗ ತನ್ನ ಸಂಬಂಧಿಕರ ಮನೆಯೊಂದರ ಕಾರ್ಯಕ್ರಮಕ್ಕೆ ಹುಡುಗಿಯನ್ನು ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದನು, ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಹುಡುಗಿ ಅದನ್ನು ತಿರಸ್ಕರಿಸಿದ್ದಾಳೆ. ನೊಂದ ಬಾಲಕಿ ತನ್ನ ಪೋಷಕರಲ್ಲಿ ನಡೆದ ವಿಷಯ ತಿಳಿಸುವುದಾಗಿ ಹೇಳಿದಾಗ ಬಾಲಕ ಕೋಪದಿಂದ ಆಕೆಯನ್ನು ಹೊಡೆದು ಕೊಂದಿದ್ದಾನೆ ಎನ್ನಲಾಗಿದೆ.
ಹುಡುಗನು ತನ್ನ ಕಾರ್ಯಗಳಿಂದ ಆಘಾತಕ್ಕೊಳಗಾಗಿ ಏನು ಮಾಡಬೇಕೆಂದು ತಿಳಿಯದೆ, ಇಡೀ ರಾತ್ರಿ ಹುಡುಗಿಯ ದೇಹದೊಂದಿಗೆ ನಿರ್ಜನ ಪ್ರದೇಶದಲ್ಲಿ ಕಳೆದಿದ್ದಾನೆ. ಶನಿವಾರ ಬೆಳಗ್ಗೆ ದಾರಿಹೋಕರು ಬಾಲಕನ ವರ್ತನೆ ಬಗ್ಗೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಘೋರ ಕೃತ್ಯ ನಡೆದಿರುವುದು ಗೊತ್ತಾಗಿದೆ.
ಇನ್ನು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸ್ವರ್ಣ ಹಾಗೂ ಇತರೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬಾಲಕನನ್ನು ವಿಚಾರಣೆ ನಡೆಸಿದ್ದು, ಬಾಲಕ ತಪ್ಪೊಪ್ಪಿಕೊಂಡಿದ್ದಾನೆ.
ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಂಡಿದ್ದಾರೆ.