ಬೆಂಗಳೂರು, ಜ.29 (DaijiworldNews/KP): ಫೆಬ್ರವರಿ 20ರ ನಂತರ ಮೇಕೆದಾಟು 2ನೇ ಹಂತದ ಪಾದಯಾತ್ರೆ ಆರಂಭ ಮಾಡುತ್ತೇವೆ ಎಂದು ರಾಮನಗರ ತಾಲೂಕಿನ ಬಸವನಪುರದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಈ ಹಿಂದೆ ಕೊರೊನಾ ಕಾರಣದಿಂದ ಮೇಕೆದಾಟು ಪಾದಯಾತ್ರೆಯನ್ನು ಸರ್ಕಾರ ತಡೆಹಿಡಿದಿತ್ತು, ಈ ಹಿನ್ನಲೆಯಲ್ಲಿ ಫೆಬ್ರವರಿ 20ರ ನಂತರ ಮೇಕೆದಾಟು 2ನೇ ಹಂತದ ಪಾದಯಾತ್ರೆ ಆರಂಭ ಮಾಡುತ್ತೇವೆ, ಈ ಬಾರಿಯ ಪಾದಯಾತ್ರೆಗೆ ಯಾವುದೇ ಆತಂಕವಿಲ್ಲ ಎಂದರು,
ಒಂದು ವರ್ಷದಿಂದ ಜಿಲ್ಲೆ ಅಭಿವೃದ್ದಿ ಕಾಣುತ್ತಿದೆಯಂತೆ, ಈ ಮುಂಚೆ ಕಾಣ್ತಿರಲಿಲ್ಲ, ಯಾರು ಈ ಮಾತು ಹೇಳುತಿದ್ದಾರೆ ಎಂಬುದನ್ನು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಕೆಲವರು ಸುಳ್ಳನ್ನು ಅವರ ಮನೆ ದೇವರು ಮಾಡಿಕೊಂಡಿದ್ದಾರೆ. ಯಾರು ಅಂತ ನಾನು ಹೇಳಲು ಹೋಗಲ್ಲ ಎಂದು ಇದೇ ವೇಳೆ ಹೆಚ್.ಡಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಉಳ್ತಾರ್ ದೊಡ್ಡಿ, ದೊಡ್ಡಮಣ್ಣಗುಡ್ಡೆ, ಮಾಕಳಿ, ತೆಂಗಿನಕಲ್ಲು ಅರಣ್ಯ ಪ್ರದೇಶದ ಬಗ್ಗೆ ಕೆಲವರು ಈಗ ಮಾತನಾಡುತ್ತಾರೆ. ಇಷ್ಟೆಲ್ಲ ತಿಳಿದುಕೊಂಡಿರುವುದನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ, ಹದಿನೈದು ವರ್ಷದ ನಂತರವಾದರು ತಿಳಿದುಕೊಳ್ಳುವ ಪ್ರಯತ್ನ ಮಾಡಿದರಲ್ಲ ಅವರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದರು.