ನವದೆಹಲಿ, ಜ 29 (DaijiworldNews/HR): ಭಯೋತ್ಪಾದಕ ದಾಳಿಯ ಸಂಚನ್ನು ಜಮ್ಮು-ಕಾಶ್ಮೀರದ ಪೊಲೀಸರು ವಿಫಲಗೊಳಿಸಿ, ರೆಸಿಸ್ಟೆನ್ಸ್ ಫ್ರಂಟ್ ಹಾಗೂ ಲಷ್ಕರ್ ಎ ತೊಯ್ಬಾ ಸಂಘಟನೆ ಜತೆ ಸಂಪರ್ಕ ಹೊಂದಿರುವ ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಉಗ್ರರನ್ನು ಶೋಪಿಯಾನ್ ನ ಫೈಸಲ್ ಮಂಝೂರ್, ಝೈಪೋರಾ ಶೋಪಿಯಾನ್ ನ ಅಝಾರ್ ಯಾಕೂಬ್ ಮತ್ತು ಬೇಗಂ ಕುಲ್ಗಾಮ್ ನ ನಾಸಿರ್ ಅಹ್ಮದ್ ಎಂದು ಗುರುತಿಸಲಾಗಿದೆ.
ಗಂದೇರ್ಬಾಲ್ ಪೊಲೀಸರು ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಶುಹಾಮಾ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಉಗ್ರರ ಬಳಿ ಇದ್ದ ಎರಡು ಚೀನಾ ನಿರ್ಮಿತ ಪಿಸ್ತೂಲ್, ಮೂರು ಮ್ಯಾಗಝೈನ್ಸ್, ಎರಡು ಹ್ಯಾಂಡ್ ಗ್ರೆನೇಡ್, ಮೂರು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.