ಬೆಂಗಳೂರು, ಜ.29 (DaijiworldNews/KP): ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಹಿನ್ನಲೆ ರಾಜ್ಯಸರಕಾರ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ರಾಜ್ಯಾದ್ಯಂತ ಜನವರಿ 31 ರಿಂದ ನೈಟ್ ಕರ್ಪ್ಯೂ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಇನ್ನು ಮುಂದೆ ನೈಟ್ ಕರ್ಪ್ಯೂ ಇರಲ್ಲ, ಪಬ್ ಮತ್ತು ರೆಸ್ಟೋರೆಂಟ್, ಹೋಟೆಲ್ಗಳಿಗೆ ಶೇ. 100 ರಷ್ಟು ಅವಕಾಶ ನೀಡಲಾಗಿದೆ ಆದರೆ ಸಿನಿಮಾ ಥಿಯೇಟರ್, ಈಜು ಕೊಳಗಳಿಗೆ ಶೇ. 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಮಸೀದಿ, ಚರ್ಚ್,ದೇವಾಲಯಗಳಲ್ಲಿ ಎಲ್ಲ ಧಾರ್ಮಿಕ ಸೇವೆಗಳಿಗೆ ಮುಕ್ತ ಅವಕಾಶವಿದೆ. ಆದರೆ ಜಾತ್ರೆ, ಮೆರವಣಿಗೆ, ಧರಣಿ, ಪ್ರತಿಭಟನೆ, ಧಾರ್ಮಿಕ ಉತ್ಸವಗಳಿಗೆ ನಿರ್ಬಂಧ ಮುಂದುವರಿಸಲಾಗಿದ್ದು, ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ, ಹೊರಾಂಗಣದಲ್ಲಿ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಇನ್ನು ಪ್ರವಾಸಿತಾಣಗಳ ಭೇಟಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ, ರಾಜ್ಯದ ಪ್ರವಾಸಿತಾಣಗಳು ಪ್ರವಾಸಿಗರಿಗೆ ಮುಕ್ತವಾಗಿರಲಿವೆ. ಸಫಾರಿ ಸೇರಿದಂತೆ ಎಲ್ಲಾ ಚಟುವಟಿಕೆಗೆ ಅವಕಾಶ ಇರಲಿದ್ದು, ಕೊವಿಡ್ ನಿಯಮ ಪಾಲಿಸಿ ಭೇಟಿ ನೀಡಬಹುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರದಿಂದ ಎಲ್ಲ ಶಾಲೆಗಳು ಆರಂಭ ಆಗಲಿದೆ, ಆದರೆ ಕೊರೊನಾ ಪತ್ತೆಯಾದರೆ ತರಗತಿಯನ್ನು ಮುಚ್ಚಲಾಗುವುದು, ಅಲ್ಲದೇ ಇಡೀ ಶಾಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ದೃಢಪಟ್ಟಿದೆ ಎನ್ನುವ ಆಧಾರದ ಮೇಲೆ ಶಾಲೆಗಳನ್ನು ಎಷ್ಟು ದಿನಮುಚ್ಚಬೇಕು ಎಂಬುದನ್ನು ಆಯಾ ಜಿಲ್ಲಾಧಿಕಾರಿಗಳ ತೀರ್ಮಾನಿಸುತ್ತಾರೆ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದರು.