ಕೋಲ್ಕತ್ತಾ, ಜ 29 (DaijiworldNews/HR): ಪೂರ್ವ ಬರ್ದ್ವಾನ್ ನಲ್ಲಿನ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಬೆಂಕಿ ಅವಘಡ ಉಂಟಾದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಮೃತಪಟ್ಟು ಅನೇಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತಪಟ್ಟ ವ್ಯಕ್ತಿಯನ್ನು ಬರ್ದ್ವಾನ್ ಜಿಲ್ಲೆಯ ಸಂಧ್ಯಾ ರಾಯ್ (60) ಎಂದು ಗುರುತಿಸಲಾಗಿದೆ.
ಕೊರೊನಾ ಸೋಂಕಿತರು ಇದ್ದ ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಸೋಂಕಿತ ವ್ಯಕ್ತಿ, ಬೆಂಕಿಯ ಕೆನ್ನಾಲೆಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದು, ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಅಷ್ಟರಲ್ಲಾಗಿಯೇ ವಾರ್ಡ್ ಗೆ ಬೆಂಕಿ ಆವರಿಸಿದೆ. ಪರಿಣಾಮ ಹಲವರು ಗಾಯಗೊಂಡು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಇನ್ನು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.