ಬೆಂಗಳೂರು, ಜ.29 (DaijiworldNews/KP): ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ರಾಜ್ಯದಲ್ಲಿ ಈಗಿರುವ ನಿರ್ಬಂಧವನ್ನು ಸಡಿಲಿಕೆ ಮಾಡುವ ಕುರಿತು ಇಂದು ಒಂದು ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿ ಮತ್ತು ತಜ್ಞನ ಜೊತೆ ಚರ್ಚೆ ನಡೆಸಲಿದ್ದಾರೆ.
ಸೋಂಕಿನ ಪ್ರಮಾಣ ಹೆಚ್ಚಿದ್ದರೂ, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆಯಿರುವುದರಿಂದ ಈಗಾಗಲೇ ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿದೆ, ಇವತ್ತಿನ ಸಭೆಯಲ್ಲಿ 50-50 ರೂಲ್ಸ್ ಮತ್ತು ನೈಟ್ ಕರ್ಫ್ಯೂವನ್ನು ಕೈ ಬಿಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಹೆಚ್ಚಿದೆ.
ಪ್ರತಿಭಟನೆ, ಮೆರವಣಿಗೆಗೆ ನಿರ್ಬಂಧ ಮುಂದುವರಿಕೆ ಮಾಡುವ ಸಾಧ್ಯತೆಯಿದ್ದು, ಸಭೆ, ಸಮಾರಂಭಗಳಲ್ಲಿ ಜನ ಸಂಖ್ಯೆ ನಿಗದಿ ಮಾಡಬಹುದು. ಇನ್ನು ಕೊರೊನಾ ಮಾರ್ಗಸೂಚಿಗಳೊಂದಿಗೆ ನರ್ಸರಿಯಿಂದ ಹೈಸ್ಕೂಲ್ ತೆರೆಯಲು ಗ್ರೀನ್ ಸಿಗ್ನಲ್ ಕೊಡಬಹುದು. ಈಗಾಗಲೇ ತಜ್ಞರ ಸಲಹೆ ಬೆನ್ನಲ್ಲೇ ನಗರದಲ್ಲಿ ಶಾಲೆ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ.
ಹೋಟೆಲ್, ಥಿಯೇಟರ್, ರೆಸ್ಟೋರೆಂಟ್, ಜಿಮ್, ಸ್ವಿಮ್ಮಿಂಗ್ ಫೂಲ್ಗಳಿಗೆ 50-50 ರೂಲ್ಸ್ ಸಡಿಲಿಕೆ ಮಾಡಿ, ಫೆಬ್ರವರಿಯಿಂದ ಯಥಾಸ್ಥಿತಿ ಕಾರ್ಯ ನಡೆಸಲು ಅವಕಾಶ ನೀಡಬಹುದು ಇಲ್ಲವೇ ವ್ಯಾಕ್ಸಿನ್ ಆದವರಿಗಷ್ಟೇ ಪ್ರವೇಶ ನೀಡುವಂತೆ ಷರತ್ತು ವಿಧಿಸುವ ಸಾಧ್ಯತೆಯಿದೆ.