ಬೆಂಗಳೂರು, ಜ 29 (DaijiworldNews/HR): ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭ ಮಾಡಿದರೆ ಸಾಕಾಗುವುದಿಲ್ಲ, ಪ್ರತಿ ಗ್ರಾಮದಲ್ಲೂ ಗೋಶಾಲೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಗೋಶಾಲೆ ಅರಂಭಿಸಲು ಸರ್ಕಾರ ಆದೇಶಿಸಿದೆ ಎಂದು ಸರ್ಕಾರದ ಪರ ವಕೀಲರು ವಿಚಾರಣೆಯ ವೇಳೆ ಮಾಹಿತಿ ನೀಡಿದ್ದು, ಇದಕ್ಕೆ ಆಕ್ಷೇಪಿಸಿದ ಮುಖ್ಯ ನ್ಯಾಯಮೂರ್ತಿಗಳು, ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಿದರೆ ಸಾಕಾಗುವುದಿಲ್ಲ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲದೆ ಪ್ರತಿ ಗ್ರಾಮ ಮಟ್ಟದಲ್ಲೂ ಗೋ ಶಾಲೆ ತೆರೆಯಬೇಕು. ಬೇರೆ ರಾಜ್ಯಗಳಿಗೆ ಹೋಗಿ ಪರಿಶೀಲನೆ ಮಾಡಿ. ಅಲ್ಲಿನ ಸರ್ಕಾರವು ಪ್ರತಿಯೊಂದು ಗ್ರಾಮದಲ್ಲಿ ಗೋಶಾಲೆ ಆರಂಭಿಸಿದೆ ಎಂದರು.
ಇನ್ನು ಕರ್ನಾಟಕದಲ್ಲಿ ಈಗ ಎಷ್ಟು ಗೋಶಾಲೆಗಳಿವೆ? ಅವುಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ? ಭವಿಷ್ಯದಲ್ಲಿ ಎಷ್ಟು ಆರಂಭಿಸಲಾಗುತ್ತದೆ? ಪ್ರತಿಯೊಂದು ಗೋಶಾಲೆಗೂ ಎಷ್ಟು ಹಣ ಒದಗಿಸಲಾಗುತ್ತದೆ ಎಂಬುದರ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಮಾಡಲು ಮಾರ್ಗಸೂಚಿಗಳು ಅಗತ್ಯವಾಗಿದ್ದು, ಮಾರ್ಗಸೂಚಿಗಳನ್ನು ಏಕರೂಪವಾಗಿ ಅಳವಡಿಸಿಕೊಂಡಾಗ ಮಾತ್ರ ಗೋಶಾಲೆಗಳನ್ನು ನಿರ್ವಹಣೆ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ
ಮುಂದಿನ ವಿಚಾರಣೆ ವೇಳೆ ರಾಜ್ಯದಲ್ಲಿ ಗೋಶಾಲೆ ಆರಂಭಿಸಲು ಮತ್ತು ನಿರ್ವಹಣೆ ಮಾಡಲು ಯಾವ ಮಾರ್ಗಸೂಚಿ ರಚನೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದೆ.