ಬೆಂಗಳೂರು, ಜ. 28 (DaijiworldNews/SM): ಆರು ತಿಂಗಳು ಪೂರೈಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಕಾಂಗ್ರೆಸ್ ಆರು ಪ್ರಶ್ನೆಗಳನ್ನು ಮುಂದಿಟ್ಟಿದೆ. ಆ ಮೂಲಕ ಆರು ತಿಂಗಳಲ್ಲಿ ಸರಕಾರ ಮಾಡಿದ ಸಾಧನೆಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ಆರು ಪ್ರಶ್ನೆಗಳು:
ನೋಟ್ ಬ್ಯಾನ್ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್ಗಳಿಂದಾಗಿ ಶುರುವಾದ ನಿರುದ್ಯೋಗ ಸಮಸ್ಯೆ ಲಾಕ್ಡೌನ್ ನಂತರ ಉತ್ತುಂಗಕ್ಕೇರಿದೆ. ಸಿಎಂ ಆಗಿ ಅರ್ಧ ವರ್ಷ ಅಧಿಕಾರ ಪೂರೈಸಿದ ಬಸವರಾಜ್ ಬೊಮ್ಮಾಯಿಯವರೇ, ಉದ್ಯೋಗ ಸೃಷ್ಟಿಗೆ ತಾವು ಕೈಗೊಂಡ ಕ್ರಮಗಳೇನು? ರೂಪಿಸಿದ ಯೋಜನೆಗಳೇನು? ಎಷ್ಟು ಉದ್ಯೋಗ ಸೃಷ್ಟಿಯಾಗಿದೆ?
ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನು ಖಾತೆಯನ್ನು ನಿಭಾಯಿಸುತ್ತಿರುವ ಬಸವರಾಜ್ ಬೊಮ್ಮಾಯಿಯವರೇ, ತಮ್ಮ ಅಧಿಕಾರದ 6 ತಿಂಗಳಲ್ಲಿ ಹಾಗೂ ನಿಮ್ಮ ಡಬಲ್ ಇಂಜಿನ್ ಸರ್ಕಾರದಲ್ಲಿ ಕೇಂದ್ರದಿಂದ ಯಾವ್ಯಾವ ಯೋಜನೆಗೆ ಎಷ್ಟು ಅನುದಾನ ತಂದಿದ್ದೀರಿ? ಜಿಎಸ್ ಟಿ ಬಾಕಿ, ನೆರೆ ಪರಿಹಾರ ಸೇರಿದಂತೆ ಎಷ್ಟು ನೆರವನ್ನು ತಂದಿದ್ದೀರಿ?
ಬಿಬಿಎಂಪಿಯಲ್ಲಿ ಭ್ರಷ್ಟಾಚಾರ, ಬಿಡಿಎಯಲ್ಲಿ ಭ್ರಷ್ಟಾಚಾರ, ನೇಮಕಾತಿಯಲ್ಲಿ ಭ್ರಷ್ಟಾಚಾರ, ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಗುತ್ತಿಗೆಯಲ್ಲಿ 40% ಕಮಿಷನ್ ಭ್ರಷ್ಟಾಚಾರ. ಈ ಸರ್ಕಾರದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ. ಬಸವರಾಜ್ ಬೊಮ್ಮಾಯಿಯವರೇ, ಈ 6 ತಿಂಗಳಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಂಡ ಕ್ರಮಗಳೇನು?
ಸಿಗದ ನೆರೆ ಪರಿಹಾರ, ದೊರಕದ ಕರೋನಾ ಪರಿಹಾರ, ಕುಂಟುವ ಅಡಳಿತಯಂತ್ರ, ಇಲ್ಲದ ವಸತಿ ಯೋಜನೆಗಳು. ಜನರ ಸಮಸ್ಯೆ ಹಲವಾರಿದ್ದರೂ ಒಂದೇ ಒಂದು ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲವೇಕೆ? ಉಪಯೋಗವಿಲ್ಲದ ದೆಹಲಿ ದರ್ಶನಕ್ಕೆ ಹೋಗುವ ತಮಗೆ ಜನತಾದರ್ಶನಕ್ಕೆ ಸಮಯವಿರಲಿಲ್ಲವೇ?
ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಮುಖ್ಯಮಂತ್ರಿಯವರು, ರಾಜ್ಯದ ಹಣಕಾಸು ಸ್ಥಿತಿಯನ್ನು ವೃದ್ಧಿಸುವಲ್ಲಿ ಕೈಗೊಂಡ ಕ್ರಮಗಳೇನು? ಆರ್ಥಿಕ ಶಿಸ್ತು ಕಾಪಾಡಲು ರೂಪಿಸಿದ ಯೋಜನೆಗಳೇನು? ತೆರಿಗೆ ಪಾಲು, ಅನುದಾನ, ಪರಿಹಾರ ಮುಂತಾದವುಗಳನ್ನು ಕೇಂದ್ರದಿಂದ ತರುವಲ್ಲಿ ಮಾಡಿದ ಪ್ರಯತ್ನಗಳೇನು?
ಸಿಎಂ ಬಸವರಾಜ್ ಬೊಮ್ಮಾಯಿಯವರೇ, ನಿಮ್ಮ ಸರ್ಕಾರಕ್ಕೆ 6 ತಿಂಗಳಗಿದೆ, ನಿಮ್ಮ ಸಚಿವರ ಕೆಲಸಗಳ ಬಗ್ಗೆ ನಿಮಗೆ ತೃಪ್ತಿ ಇದೆಯೇ? ಅಸಮಾಧಾನದಿಂದ ಒಲ್ಲದ ಖಾತೆ ನಿಭಾಯಿಸುತ್ತಿರುವವರು, ಉಸ್ತುವಾರಿಗಾಗಿ ಕಿತ್ತಾಡುವವರು, ತಮ್ಮದೇ ಶಾಸಕರೊಂದಿಗೆ ಮುನಿಸಿಟ್ಟುಕೊಂಡ ಸಚಿವರುಗಳು ನಿಮ್ಮಲ್ಲಿದ್ದಾರೆ, ಅವರ ಕೆಲಸಗಳ ಬಗ್ಗೆ ಸಮಾಧಾನವಿದೆಯೇ?