ಬೆಂಗಳೂರು,ಜ.27 (DaijiworldNews/KP): ಅಧಿಕಾರ, ಸ್ಥಾನ ಮಾನ ಎಲ್ಲವನ್ನೂ ನೀಡಿದ ಸದೃಢ ಬಿಜೆಪಿ ಪಕ್ಷವನ್ನು ತೊರೆಯುವ ಮಾತೆ ಇಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ವಿಧಾನಸೌಧದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರಮೋದಿ ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಜನಪರವಾದ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದು, ಕೊರೊನಾ ಮಧ್ಯೆಯೂ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆದಿವೆ, ನಾವೂ ಕೂಡ ನಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಇಂತಹ ಸಮಯದಲ್ಲಿ ವಿನಾಕಾರಣ ಪಕ್ಷಾಂತರದ ಬಗ್ಗೆ ಮಾತನಾಡುವುದಕ್ಕೆ ಎಲ್ಲರೂ ತೆರೆ ಎಳೆಯಬೇಕು ಎಂದರು.
ಇನ್ನು 17 ಜನ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಚುನಾವಣೆಗೆ ನಿಂತು ಗೆದ್ದು ಶಾಸಕರಾದ ಮೇಲೆ ಯಡಿಯೂರಪ್ಪ ಅವರ ಮಾತು ಕೊಟ್ಟಂತೆ ಪಕ್ಷದಲ್ಲಿ ಅಧಿಕಾರ ನೀಡಿದ್ದಾರೆ. ಯಾರೂ ಕೂಡ ಪಕ್ಷ ತೊರೆಯುವ ಪ್ರಶ್ನೆಯೇ ಬರುವುದಿಲ್ಲ. ಪದೇ ಪದೇ ಇಂತಹ ವಿಚಾರದ ಬಗ್ಗೆ ಜನರಲ್ಲಿ ಗೊಂದಲ ಉಂಟು ಮಾಡುವವರೆ ಇದಕ್ಕೆ ಉತ್ತರ ನೀಡಬೇಕು ಎಂದರು. ಮುಂಬರುವ ಚುನಾವಣೆಯಲ್ಲೂ ಬಿಜೆಪಿಯಿಂದಲೇ ನಾವೇಲ್ಲರೂ ಕಣಕ್ಕಿಳಿಯುತ್ತೇವೆ ಎಂದರು.
ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿ ರಾಜ್ಯದಲ್ಲೂ ಬಲಿಷ್ಟವಾಗಿ ಬೆಳೆದಿದ್ದು, ವಿಧಾನಸಭಾ ಸಭಾ ಚುನಾವಣೆಯಲ್ಲೂ ಮತ್ತೆ ಬಿಜೆಪಿಯಿಂದಲೇ ಕಣಕ್ಕೆ ಇಳಿಯುತ್ತೇವೆ. ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಾಗಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಬೇರೆ ಪಕ್ಷದ ಯಾರೂ ಕೂಡ ನಮ್ಮೊಂದಿಗೆ ಸಂಪರ್ಕದಲ್ಲಿ ಇಲ್ಲ. ಅದರ ಅವಶ್ಯಕತೆ ಕೂಡ ನಮಗಿಲ್ಲ, ಬಿಜೆಪಿ ನನಗೆ ಅಧಿಕಾರ ಸ್ಥಾನ, ಮಾನ ಎಲ್ಲವನ್ನೂ ನೀಡಿದೆ.ಹಾಗಿರುವಾಗ ಬೇರೆ ಪಕ್ಷಕ್ಕೆ ಹೋಗಿ ಮಾಡುವುದು ಏನಿದೆ, ಬಿಜೆಪಿ ಪಕ್ಷ ಸಚಿವಸ್ಥಾನ ನೀಡಿದೆ, ಎರಡು ಜಿಲ್ಲೆಗಳ ಉಸ್ತುವಾರಿ ನೀಡಿದೆ ಇದಕ್ಕಿಂತ ನಮಗೆ ಇನ್ನೇನು ಬೇಕಿದೆ.? ರಾಜ್ಯದಲ್ಲೂ ಮತ್ತು ಬಿಬಿಎಂಪಿಯಲ್ಲೂ ಕೂಡ ಬರುವ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.ಪಕ್ಷ ತೊರೆದು ಬಂದ ಎಲ್ಲ 17 ಜನರೂ ಕೂಡ ನಾವು ಒಟ್ಟಿಗೆ ಇದ್ದೇವೆ ಎಂದರು.