ಬೆಂಗಳೂರು, ಜ.27 (DaijiworldNews/KP): ಸಿಎಂ ಇಬ್ರಾಹಿಂ ಜೆಡಿಎಸ್ಗೆ ಬರುವುದಾದರೆ ಅವರನ್ನು ಸ್ವಾಗತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಾನು ಇಬ್ರಾಹಿಂ ಜತೆ ಹಲವು ಬಾರಿ ಚರ್ಚಿಸಿದ್ದೇನೆ. ವಿಧಾನ ಪರಿಷತ್ ವಿಪಕ್ಷ ಸ್ಥಾನ ಕೊಟ್ಟರೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದೆ ಎಂದರು.
ಇನ್ನು ಇಬ್ರಾಹಿಂ ಪಕ್ಷಕ್ಕೆ ಬರುವುದಾದರೆ ಮುಕ್ತ ಆಹ್ವಾನವಿದ್ದು, ಅವರು ದೇವೇಗೌಡರ ಜತೆ ಹಲವು ವರ್ಷಗಳಿಂದ ಒಳ್ಳೆಯ ಒಡನಾಟದಲ್ಲಿದ್ದಾರೆ ಎಂದು ಹೇಳಿದರು.
ಅತಂತ್ರ ಪರಿಸ್ಥಿತಿ ಬಂದರೆ ಜೆಡಿಎಸ್ಗೆ ಸ್ವತಂತ್ರ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಕೆಲವು ನಾಯಕರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರ ಪಕ್ಷವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿ ಬದಲಾಗಿ ನಮ್ಮ ಪಕ್ಷದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.