ಮುಂಬೈ, ಜ.27 (DaijiworldNews/KP): ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ಗೂಗಲ್, ಅದರ ಸಿಇಒ ಸುಂದರ್ ಪಿಚೈ ಮತ್ತು ಕಂಪನಿಯ ಇತರ ಐವರು ಉದ್ಯೋಗಿಗಳ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಲಯದ ಆದೇಶದ ಮೆರೆಗೆ ಉಪನಗರ ಅಂದೇರಿಯಲ್ಲಿರುವ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಸುನೀಲ್ ದರ್ಶನ್ ಅವರು ತಾವು 2017 ರಲ್ಲಿ ನಿರ್ದೇಶಿಸಿದ ’ಏಕ್ ಹಸೀನಾ ಥಿ ಏಕ್ ದೀವಾನಾ ಥ’ ಚಿತ್ರದ ಹಕ್ಕುಗಳನ್ನು ಯಾರಿಗೂ ನೀಡದಿದ್ದರೂ, ಅದನ್ನು ಗೂಗಲ್ ಮಾಲೀಕತ್ವದ ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ಗೂಗಲ್ ಮತ್ತು ಅದರ ಉನ್ನತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸುನೀಲ್ ದರ್ಶನ್ ನ್ಯಾಯಾಲಯದ ಮೊರೆ ಹೋಗಿದ್ದರು.
ಚಲನಚಿತ್ರವು ಅವರ ಬೌದ್ಧಿಕ ಆಸ್ತಿಯಾಗಿದ್ದು, ವೀಡಿಯೊ-ಶೇರಿಂಗ್ ಪ್ಲಾಟ್ಫಾರ್ಮ್ನಲ್ಲಿ ಚಲನಚಿತ್ರವನ್ನು ಅಪ್ಲೋಡ್ ಮಾಡುವ ಮೂಲಕ ಹಲವಾರು ಜನರು ಹಣವನ್ನು ಗಳಿಸುತ್ತಿದ್ದಾರೆ ಎಂದು ಅವರು ಹೇಳಿದ್ದು, ಇದು ಕಾನೂನಿಗೆ ವಿರುದ್ದವಾಗಿದೆ ಎಂದರು.
ಹಕ್ಕುಸ್ವಾಮ್ಯ ಹೊಂದಿರುವವರು ತಮ್ಮ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ ವೀಡಿಯೊದ ಕುರಿತು ನಮಗೆ ಸೂಚಿಸಿದಾಗ, ನಾವು ಕಾನೂನಿಗೆ ಅನುಸಾರವಾಗಿ ವಿಷಯವದ ಕುರಿತು ತ್ವರಿತವಾಗಿ ಕ್ರಮ ತೆಗೆದುಹಾಕುವುದು ಮತ್ತು ಹಕ್ಕುಸ್ವಾಮ್ಯ ಸ್ಟ್ರೈಕ್ಗಳನ್ನು ಹೊಂದಿರುವ ಬಳಕೆದಾರರ ಖಾತೆಗಳನ್ನು ರದ್ದುಗೊಳಿಸುತ್ತೆವೆ ಎಂದು ವಕ್ತಾರರು ತಿಳಿಸಿದ್ದಾರೆ.
ಇನ್ನು ಹಕ್ಕುಸ್ವಾಮ್ಯ ಉಲ್ಲಂಘನೆಯ ಸ್ವರೂಪದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ಯೂಟ್ಯೂಬ್ ನ ಕಂಟೆಂಟ್ ಐಡಿ ಸಿಸ್ಟಮ್ ಹಕ್ಕುದಾರರನ್ನು ಗುರುತಿಸಲು, ನಿರ್ಬಂಧಿಸಲು, ಉತ್ತೇಜಿಸಲು ಸ್ವಯಂಚಾಲಿತ ಮಾರ್ಗವನ್ನು ನೀಡುತ್ತದೆ ಮತ್ತು ಅವರ ರಚಿಸಿರುವ ವಿಡೀಯೊ ಅಪ್ಲೋಡ್ಗಳಿಂದಲೂ ಹಣವನ್ನು ಗಳಿಸಬಹುದಾಗಿದೆ ಎಂದರು.