ದೆಹಲಿ, ಜ 26 (DaijiworldNews/KP): ದೆಹಲಿಯ 73ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ದಕ್ಷಿಣ ಭಾರತದಿಂದ ಕರ್ನಾಟಕದ ಸ್ತಬ್ಧಚಿತ್ರ ಮಾತ್ರವೇ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಅದರಲ್ಲಿ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು, ಮಣ್ಣಿನ ಮಡಕೆ, ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಶ್ರೀಗಂಧ ಚಿಕಣಿ, ಕೈಮಗ್ಗದ ಸೀರೆಗಳು ಹಾಗೂ 16 ಕರಕುಶಲ ವಸ್ತುಗಳಿಂದ ಟ್ಯಾಬ್ಲೋ ರಾರಾಜಿಸುತಿತ್ತು.
ಸುಪ್ರಸಿದ್ಧ ಕಲಾ ನಿರ್ದೇಶಕ ಶಶಿಧರ್ ಅಡಪ ನೇತೃತ್ವದಲ್ಲಿ ಪ್ರತಿರೂಪಿ ಸಂಸ್ಥೆಯ ನೂರಕ್ಕೂ ಹೆಚ್ಚು ಕಲಾವಿದರು, ಹೆಸರಾಂತ ಸಂಗೀತ ನಿರ್ದೇಶಕ ಪ್ರವೀಣ್ ದಯಾನಂದ್ ರಾವ್ ಮತ್ತು ತಂಡ ಹಾಗೂ ಜಾನಪದ ತಜ್ಞ ಡಾ.ರಾಧಾಕೃಷ್ಣ ಉರಾಳ ಕದಂಬ ಕಲಾ ಕೇಂದ್ರ ತಂಡವೂ ಶ್ರಮಿಸಿದ್ದು ಇವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್, ಹರ್ಷ ನಿರ್ದೇಶನ ನೀಡಿದ್ದಾರೆ.
ಸ್ತಬ್ಧಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಮರದ ಕಸೂತಿ ಕೆತ್ತನೆಯ ಆನೆಯ ಕಲಾಕೃತಿ ಹಾಗೂ ಕೆಳಭಾಗದಲ್ಲಿ ಯಕ್ಷಗಾನ ಬೊಂಬೆಯಾಟದ ಚಿತ್ರವು, ಗಂಜೀಫಾ ಕಲಾಕೃತಿ ಮಧ್ಯಭಾಗದಲ್ಲಿ ಬಿದಿರಿನಿಂದ ಮಾಡಿದ ಹೂಜಿಯು ಜನರ ಗಮನ ಸೆಳೆದಿದ್ದು, ಇದರ ಜೊತೆಗೆ ವಿಶೆಷವಾಗಿ ಕರಾವಳಿಯ ಭೂತಾರಾಧನೆಯ ಮುಖವಾಡ ಹೊತ್ತ ಲೋಹದ ಕಲಾಕೃತಿ ಕಾಣಬಹುದು.
ಹೂಜಿಯ ಹಿಂಬದಿಯಲ್ಲಿ ಬಿದಿರಿನಿಂದ ನವಿಲುಗಳ ಚಿತ್ರವನ್ನು ಸಿದ್ದಪಡಿಸಲಾಗಿದ್ದು, ಇನ್ನು ಶ್ರೀಗಂಧ ಮರದ ಕರತ್ತನೆ ಹಾಗೂ ಮಣ್ಣಿನ ಕಲಾಕೃತಿ ಗಳು ಸ್ತಬ್ಧಚಿತ್ರದ ಕೊನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ, ಕಮಲದೇವಿ ಚಟ್ಟೋಪಾಧ್ಯಾಯರ ದಂಧದ ಪೆಟ್ಟಿಗೆ, ಸಂಡೂರಿನ ಚೀಲಗಳು ಇನ್ನಿತರ ವಸ್ತುಗಳಿಂದ ಟ್ಯಾಬ್ಲೋವನ್ನು ಅಲಂಕರಿಸಲಾಗಿತ್ತು.
ಇದೆ ವೇಳೆ ಕರ್ನಾಟಕ ಭಾಗದ ಇಳಕಲ್ ಸೀರೆ, ಮೊಳಕಾಲ್ಮೋರು ಸೀರೆ, ಮೈಸೂರು ರೇಷ್ಮೆ ಸೀರೆಗಳು, ಪಶ್ಚಿಮ ಘಟ್ಟದಲ್ಲಿ ಲಭ್ಯವಿರುವ ಬೆತ್ತ, ಬಿದಿರು, ಕಾಡುಬಳ್ಳಿಗಳು ಹಾಗೂ ತಾಟಿನಿಂಗು ಮರದ ಎಲೆಯಿಂದ ತಯಾರಿಸಿದ ಬುಟ್ಟಿಗಳು ಸ್ತಬ್ಧಚಿತ್ರ ಮೆರುಗನ್ನು ಇನ್ನಷ್ಟು ಹೆಚ್ಚು ಮಾಡಿದೆ.